ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ 3 ಕಡೆಗಳಲ್ಲಿ ಗುರುವಾರ ಒಂದೇ ದಿನ ಮೂರು ಚಿರತೆಗಳ ಕಳೇಬರ ಪತ್ತೆಯಾಗಿದೆ. ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ 3 ಕಡೆಗಳಲ್ಲಿ ಗುರುವಾರ ಒಂದೇ ದಿನ ಮೂರು ಚಿರತೆಗಳ ಕಳೇಬರ ಪತ್ತೆಯಾಗಿದೆ.
ಒಂದು ಚಿರತೆ ವಿಷಪ್ರಾಶನದಿಂದ ಮೃತಪಟ್ಟರೆ, ಇನ್ನೆರಡು ಕಾದಾಟದಲ್ಲಿ ಮೃತಪಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಂಡ್ಲುಪೇಟೆ ಬಫರ್ ವಲಯದ ಕೂತನೂರು ಬಳಿಯ ಜಿ.ಆರ್.ಗೋವಿಂದರಾಜು ಎಂಬುವವರ ಕೃಷಿ ಜಮೀನಿನಲ್ಲಿ ಮೂರು ವರ್ಷದ ಹೆಣ್ಣು ಚಿರತೆಯನ್ನು ವಿಷ ಹಾಕಿ ಕೊಲ್ಲಲಾಗಿದೆ.
‘ಚಿರತೆಯು ಸಾಕು ನಾಯಿಯನ್ನು ಕೊಂದಿತೆಂದು ಕೃಷಿ ಜಮೀನಿನ ಕಾವಲುಗಾರ ನಾಯಿಯ ಮೃತದೇಹಕ್ಕೆ ಕೀಟನಾಶಕ ಸಿಂಪಡಿಸಿದ್ದರು. ಚಿರತೆಯು ಮತ್ತೆ ಬಂದು ಮೃತದೇಹವನ್ನು ತಿಂದಿದ್ದರಿಂದ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾವನ್ನಪ್ಪಿರುವುದು 3 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ. ಕೂತನೂರು ಗ್ರಾಮದ ಸರ್ವೆ ನಂ-68ರ ಜಿ.ಆರ್.ಗೋವಿಂದರಾಜು ಜಮೀನಿನಲ್ಲಿ ಚಿರತೆ ಮೃತಪಟ್ಟಿರುವ ವಿಷಯ ತಿಳಿದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಅವರು ವಲಯ ಅರಣ್ಯಾಧಿಕಾರಿ ಎನ್.ಪಿ.ನವೀನ್‍ಕುಮಾರ್ ಹಾಗು ನೌಕರರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ಧಾರೆ.
ಸರ್ವೆ ನಂ-64 ರಲ್ಲಿರುವ ಜಿ.ಆರ್.ಗೋವಿಂದರಾಜು ಅವರ ಸಹೋದರ ಸೋಮಶೇಖರ್ ಜಮೀನಿನಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿ ಬಗ್ಗೆ ಸಂಶಯ ವ್ಯಕ್ತದ ಹಿನ್ನೆಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜಮೀನಿನಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಕೊಂದಿತ್ತು. ನಾಯಿಯ ಕಳೆಬರದ ಮೇಲೆ ಕೀಟನಾಶಕವನ್ನು ಸಿಂಪಡನೆ ಮಾಡಿದ್ದು, ಮತ್ತೆ ಬಂದು ತಿಂದಿದ್ದರಿಂದ ಚಿರತೆ ಸಾವನ್ನಪಿದೆ.
ನಾನೇ ವಿಷ ಸಿಂಪಡನೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ಧಾನೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಗುಂಡ್ಲುಪೇಟೆ ಬಫರ್ ಝೋನ್ ವಲಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ