ಚೆನ್ನೈ: ಕಾನೂನು ಜಾರಿ ನಿರ್ದೇಶನಾಲಯ ಎಂಟು ತಿಂಗಳ ಹಿಂದೆ ಬಂಧಿಸಿದ್ದ ತಮಿಳುನಾಡಿನ ಖಾತೆ ರಹಿತ ಸಚಿವ ವಿ.ಸೆಂಥಿಲ್ ಬಾಲಾಜಿ ಸೋಮವಾರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮದ್ರಾಸ್ ಹೈಕೋರ್ಟ್ ಫೆಬ್ರವರಿ 14ರಂದು ಬಾಲಾಜಿ ಜಾಮೀನು ಅರ್ಜಿಯ ವಿಚಾರಣೆಗೆ ದಿನ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಎರಡು ದಿನ ಮುನ್ನ ರಾಜೀನಾಮೆ ನೀಡಲಾಗಿದೆ. ಅವರ ಜಾಮೀನು ಅರ್ಜಿ ವಿಚಾರಣಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಸೆಂಥಿಲ್ ಡಿಎಂಕೆ ಸಂಪುಟದಲ್ಲಿ ಮುಂದುವರಿದಿರುವ ಕ್ರಮವನ್ನು ಕಟುವಾಗಿ ಟೀಕಿಸಿದ್ದ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರಿದ್ದ ಪೀಠದ ಮುಂದೆ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಸೆಂಥಿಲ್ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಅಂದರೆ 2014ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಕಾಯ್ದೆ ಅನ್ವಯ ಬಾಲಾಜಿಯವರನ್ನು ಕಾನೂನು ಜಾರಿ ನಿರ್ದೇಶನಾಲಯ ಜೂನ್ 14ರಂದು ಬಂಧಿಸಿತ್ತು. ಬಂಧನದ ಬಳಿಕ ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ಸೇರಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜುಲೈ 17ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪುಳ್ಹಾಲ್ ಕೇಂದ್ರೀಯ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ.