Home Uncategorized ಬಡತನ ಶೇ.5ಕ್ಕೆ ಇಳಿದಿದೆ ಎಂಬ ಸರಕಾರದ ಹೇಳಿಕೆಯ ಹಿಂದಿನ ಸತ್ಯಾಂಶವೇನು?

ಬಡತನ ಶೇ.5ಕ್ಕೆ ಇಳಿದಿದೆ ಎಂಬ ಸರಕಾರದ ಹೇಳಿಕೆಯ ಹಿಂದಿನ ಸತ್ಯಾಂಶವೇನು?

22
0

ದೇಶದಲ್ಲೀಗ ಬಡತನ ಶೇ.5ಕ್ಕೆ ಇಳಿದಿದೆ ಎಂದು ಮೋದಿ ಸರ್ಕಾರ ಹೇಳಕೊಂಡಿದೆ. ಆದರೆ ಈ ಅಂಕಿ ಅಂಶಕ್ಕೆ ಯಾವುದೇ ಆಧಾರವನ್ನು ನೀಡಿಲ್ಲ.

ಒಂದು ದಶಕಕ್ಕೂ ಹೆಚ್ಚಿನ ವಿರಾಮದ ಬಳಿಕ ಕೌಟುಂಬಿಕ ಬಳಕೆ ವೆಚ್ಚ ಸಮೀಕ್ಷೆ 2022-23 (ಎಚ್ಇಸಿಎಸ್) ವರದಿಯು ನಮ್ಮ ಮುಂದಿದೆ. ಎಚ್ಇಸಿಎಸ್ ವರದಿಯನ್ನು ಸಾರ್ವತ್ರಿಕ ಚುನಾವಣೆಗಳ ನಂತರವೇ ಬಹಿರಂಗೊಳಿಸಲಾಗುವುದು ಎಂದು ಮಾಧ್ಯಮಗಳಿಗೆ ಈ ಹಿಂದೆ ತಿಳಿಸಲಾಗಿದ್ದರೂ ಅದನ್ನು ಈಗಲೇ ಬಿಡುಗಡೆಗೊಳಿಸಲಾಗಿದೆ. ಎಲ್ಲೋ ಒಂದು ಕಡೆ ಮನದಾಳದಲ್ಲಿ ಕೊನೇ ಕ್ಷಣದ ಬದಲಾವಣೆ ಕಾಣುತ್ತಿದ್ದು, ಚುನಾವಣೆಗೆ ಮುನ್ನ 27 ಪುಟಗಳ ಫ್ಯಾಕ್ಟ್ಶೀಟ್ ಅನ್ನು ಪ್ರಕಟಿಸಿರುವುದು ಇದಕ್ಕೆ ಪುರಾವೆಯಾಗಿದೆ.

ಇದಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲವಾದರೂ ಫ್ಯಾಕ್ಟ್ಶೀಟ್ ಬಿಡುಗಡೆಗೊಂಡ ಬೆನ್ನಲ್ಲೇ ಸರಕಾರದ ಯಶಸ್ಸಿನ ಬಗ್ಗೆ ಅಭಿಪ್ರಾಯವನ್ನು ರೂಪಿಸುವ ಕೆಲಸ ಆರಂಭಗೊಂಡಿರುವುದು ಖಚಿತವಾಗಿದೆ. ಬಡತನವು ಶೇ.5ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿರುವ ನೀತಿ ಆಯೋಗವು ಈ ಸಾಧನೆಗಾಗಿ ಸರಕಾರವನ್ನು ಶ್ಲಾಘಿಸಿದೆ.

2011-12ಕ್ಕೆ ಹೋಲಿಸಿದರೆ 2022-23ರಲ್ಲಿ ಬಡತನ ಇಳಿಕೆಯ ಕುರಿತು 27 ಪುಟಗಳ ವರದಿಯು ಏನನ್ನೂ ಹೇಳಿಲ್ಲ. ಬದಲಿಗೆ ಅದು ಹಿಂದಿನ ಎಚ್ಸಿಇಎಸ್ಗಳಿಗೆ ಹೋಲಿಸಿದರೆ ಪ್ರಸ್ತುತ ಎಚ್ಸಿಇಎಸ್ ನಲ್ಲಿಯ ಕಾರ್ಯಪದ್ಧತಿ ಬದಲಾವಣೆಯ ಬಗ್ಗೆ ಎಚ್ಚರಿಸಿದೆ. ಫ್ಯಾಕ್ಟ್ಶೀಟ್ ಹೋಲಿಕೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪಟ್ಟಿ ಮಾಡಿದೆ.

ಬಳಕೆ ವೆಚ್ಚ ಸಮೀಕ್ಷೆಯನ್ನು ಹಿಂದಿನ ಸಮೀಕ್ಷೆಗಳ ಜೊತೆ ಹೋಲಿಸುವ ಕ್ರಮವಿಲ್ಲ ಎಂದು ಈ ಸಮೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಸಮೀಕ್ಷೆ ಸಂಸ್ಥೆ (ಎನ್ಎಸ್ಒ)ಯು ಹೇಳಿದೆ.

ಅಷ್ಟಕ್ಕೂ ಈ ಸಲದ ಸಮೀಕ್ಷೆ ಹಿಂದಿನ ಸಮೀಕ್ಷೆಗಳಿಗಿಂತಲೂ ಬೇರೆಯದೇ ಆದ ವಿಧಾನಗಳನ್ನು ಆಧರಿಸಿದ್ದು ಎಂದೇ ಅದರಲ್ಲಿ ಸ್ಪಷ್ಟವಿದೆ. ಆದಾಗ್ಯೂ ನೀತಿ ಆಯೋಗದ ಸಿಇಒ ಒಂದು ಹೆಜ್ಜೆ ಮುಂದೆಯೇ ಹೋಗಿ ಬಡತನ ಇಳಿಕೆಯನ್ನು ಪ್ರತಿಪಾದಿಸುವಲ್ಲಿ ಪ್ರಸ್ತುತ ಸಮೀಕ್ಷೆಯನ್ನು ಹಿಂದಿನ ಸಮೀಕ್ಷೆಗಳಿಗೆ ಹೋಲಿಸಿದ್ದಾರೆ.

ನೀತಿ ಆಯೋಗವು ಬಡತನ ಮಟ್ಟವನ್ನು ಅಳೆಯಲು ಹಿಂದಿನ ಯೋಜನಾ ಆಯೋಗದಂತೆ ‘ಪ್ರಸ್ತುತ ಬಡತನ ರೇಖೆ’ಯನ್ನು ಹೊಂದಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಹೆಚ್ಚುವರಿಯಾಗಿ ಇತ್ತೀಚಿನ ವರ್ಷಗಳಲ್ಲಿ ನೈಜ ಆದಾಯಗಳು ಕುಂಠಿತಗೊಳ್ಳುತ್ತಿರುವಾಗ ಬಳಕೆ ವೆಚ್ಚವು ಹೆಚ್ಚುತ್ತಿದೆ ಎಂದು ವಾದಿಸುವುದು ಕುತೂಹಲಕಾರಿಯಾಗಿದೆ. ಆದಾಗ್ಯೂ ಸರಕಾರದ ಪ್ರತಿನಿಧಿಗಳು ವಾದಿಸಲು ಎಚ್ಸಿಇಎಸ್ 2023ರ ದತ್ತಾಶಗಳನ್ನು ಬಳಸಿಕೊಂಡಿದ್ದಾರೆ.

ಎಚ್ಸಿಇಎಸ್ 2022-23ರಲ್ಲಿ ಮಾದರಿ ವಿಧಾನವು ಗಮನಾರ್ಹ ಬದಲಾವಣೆಗೆ ಒಳಗಾಗಿದೆ. ಎರಡನೇ ಹಂತದ ಸ್ತರಗಳ ವರ್ಗೀಕರಣವನ್ನು ಈಗ ಗ್ರಾಮೀಣ ಪ್ರದೇಶಗಳಿಗೆ ಭೂಮಿ ಮತ್ತು ನಗರ ಪ್ರದೇಶಗಳಿಗೆ ಕಾರು ಲಭ್ಯತೆಯ ಆಧಾರದಲ್ಲಿ ಮಾಡಲಾಗಿದೆ. ಹಿಂದಿನ ಸಮೀಕ್ಷೆಗಳಲ್ಲಿ ವರ್ಗೀಕರಣವನ್ನು ಗ್ರಾಮೀಣ ಪ್ರದೇಶಗಳಿಗೆ ಕುಟುಂಬ ಸ್ಥಿತಿ ಮತ್ತು ಚಟುವಟಿಕೆ ಹಾಗೂ ನಗರ ಪ್ರದೇಶಗಳಿಗೆ ಮಾಸಿಕ ತಲಾದಾಯದ ಆಧಾರದಲ್ಲಿ ಮಾಡಲಾಗುತ್ತಿತ್ತು.

ಕೃಷಿ ಕಾರ್ಮಿಕರು ಕೃಷಿಕರಿಗಿಂತ ಹೆಚ್ಚಾಗಿರುವ ದೇಶದಲ್ಲಿ ಭೂಮಿಯ ಲಭ್ಯತೆಯು ಸೀಮಿತವಾಗಿರುತ್ತದೆ. ನಗರ ಪ್ರದೇಶಗಳಿಗೆ 10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಮತ್ತು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರುಗಳನ್ನು ಹೊಂದಿರುವ ಮತ್ತು ಕಾರುಗಳನ್ನು ಹೊಂದಿರದ ಕುಟುಂಬಗಳ ಆಧಾರದಲ್ಲಿ ಕುಟುಂಬಗಳನ್ನು ವರ್ಗೀಕರಿಸಲಾಗಿದೆ. ಶೇ.8ರಷ್ಟು ಕುಟುಂಬಗಳು ಕಾರುಗಳನ್ನು ಹೊಂದಿರುವ ದೇಶದಲ್ಲಿ ನಗರ ಪ್ರದೇಶಗಳಲ್ಲಿ ಎರಡನೇ ಸ್ತರವು ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಹೀಗಾಗಿ ಎಚ್ಸಿಇಎಸ್ ಮಾದರಿ ವಿಧಾನದಲ್ಲಿ ಸಿರಿವಂತ ಗುಂಪುಗಳ ಹೆಚ್ಚಿನ ಪ್ರಾತಿನಿಧ್ಯ ಕಂಡು ಬರುತ್ತಿದೆ, ಇದರಿಂದಾಗಿ ಬಳಕೆ ವೆಚ್ಚದಲ್ಲಿ ಹೆಚ್ಚಳ ಕಂಡು ಬಂದಿದೆ.

ಪ್ರಸ್ತುತ ಬೆಲೆಗಳಲ್ಲಿ ಸರಾಸರಿ ಮಾಸಿಕ ತಲಾ ಬಳಕೆಯ ವೆಚ್ಚ (ಎಂಪಿಸಿಇ) ಗ್ರಾಮೀಣ ಕುಟುಂಬಗಳಿಗೆ 3,773 ರೂ.ಗೆ ಮತ್ತು ನಗರ ಪ್ರದೇಶಗಳ ಕುಟುಂಬಗಳಿಗೆ 6,459 ರೂ.ಗೆ ಹೆಚ್ಚಿದೆ ಎಂದು ಎಚ್ಸಿಇಎಸ್ 2022-23 ಹೇಳುತ್ತದೆ. ಭಾರತದಲ್ಲಿ ಬಡತನವು ಶೇ.5ಕ್ಕೆ ಇಳಿಕೆಯಾಗಿದೆ ಎಂದು ಹೇಳಲು ಈ ಅಂಕಿಅಂಶಗಳನ್ನು ಬಳಸಿಕೊಳ್ಳಲಾಗಿದೆ.

ಇದರ ಹೊರತಾಗಿ ಬಡತನ ನಿರ್ಮೂಲನೆಯ ಯಾವುದೇ ಉಲ್ಲೇಖಗಳಿಲ್ಲ ಅಥವಾ ಯಾವ ಲೆಕ್ಕಾಚಾರದಲ್ಲಿ ಬಡತನ ಶೇ.5ಕ್ಕೆ ಇಳಿದಿದೆ ಎಂಬ ಸ್ಪಷ್ಟ ವಿವರಗಳೂ ಇಲ್ಲ.

27 ಪುಟಗಳ ಫ್ಯಾಕ್ಟ್ ಶೀಟ್ ಹೆಚ್ಚಾಗಿ ಅನುಪಾತಗಳನ್ನು ಮತ್ತು ಪ್ರಮಾಣಗಳನ್ನು ಆಧರಿಸಿದೆ. ನೈಜ ಮೊತ್ತಗಳೊಂದಿಗೆ ಯಾವುದೇ ಹೋಲಿಕೆಯಿಲ್ಲ. ತುಲನಾತ್ಮಕ ದೃಷ್ಟಿಕೋನದಲ್ಲಿ ನೈಜ ವೆಚ್ಚವನ್ನು ನಿರ್ಧರಿಸಲು ಪ್ರಸ್ತುತ ವೆಚ್ಚವನ್ನು ಕಡಿಮೆ ಮಾಡಲು ಗ್ರಾಹಕ ಬೆಲೆ ಸೂಚ್ಯಂಕವನ್ನು ಬಳಸಬೇಕು. ವರ್ಷಗಳ ಹೋಲಿಕೆಗಳನ್ನು ಮಾಡುವಾಗ ನೈಜ ವೆಚ್ಚ ಮತ್ತು ಬಳಕೆಯ ಪ್ರಮಾಣದ ಬಗ್ಗೆ ಮಾಹಿತಿಯ ಕೊರತೆಯಿದೆ. ಹೆಚ್ಚುವರಿಯಾಗಿ ಎಚ್ಸಿಇಎಸ್ 2022-23 ಹಿಂದಿನ ಸಮೀಕ್ಷೆಗಳಿಗಿಂತ ಭಿನ್ನವಾಗಿ ಸಾಮಾಜಿಕ-ಕಲ್ಯಾಣ ಯೋಜನೆಗಳ ಲಾಭಗಳನ್ನು ಗಣನೆಗೆ ತೆಗೆದುಕೊಂಡಿದೆ.

ಆರ್ಥಿಕ ಬೆಳವಣಿಗೆ ಮತ್ತು ಪ್ರಗತಿಯೊಂದಿಗೆ ಒಟ್ಟು ಕುಟುಂಬ ವೆಚ್ಚದಲ್ಲಿ ಆಹಾರ ವೆಚ್ಚದ ಪಾಲು ಕಡಿಮೆಯಾಗುತ್ತದೆ. ಭಾರತದಲ್ಲಿ ಪ್ರಸ್ತುತ ಆಹಾರ ವೆಚ್ಚ ಮಟ್ಟವು ಗ್ರಾಮೀಣ ಕುಟುಂಬಗಳಿಗೆ ಶೇ.46.38 ಮತ್ತು ನಗರ ಪ್ರದೇಶಗಳ ಕುಟುಂಬಗಳಿಗೆ ಶೇ.39.17ರಷ್ಟಿದ್ದು,ಅಮೆರಿಕ (ಶೇ.6.4) ಮತ್ತು ಸಿಂಗಾಪುರ (ಶೇ.6.9)ಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ತುಂಬ ಹೆಚ್ಚಾಗಿದೆ. ಹೀಗಾಗಿ ಇದನ್ನು ಆರ್ಥಿಕ ಅಭಿವೃದ್ಧಿಯ ಸಂಕೇತವನ್ನಾಗಿ ಪರಿಗಣಿಸುವಂತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗ ಬೆಳವಣಿಗೆ ಮತ್ತು ನೈಜ ವೇತನಗಳು ಕಡಿಮೆಯಾಗಿರುವಾಗ ಬಡತನ ಹೇಗೆ ಇಳಿಯಲು ಸಾಧ್ಯ?

2004-05ರಿಂದ 2011-12ರವರೆಗೆ ನೈಜ ವೇತನದಲ್ಲಿ ಸ್ಪಷ್ಟವಾದ ಮತ್ತು ನಿರಂತರ ಏರಿಕೆ ಕಂಡುಬಂದಿತ್ತು. ಆದರೆ 2013ರಿಂದ 2017ರ ಅವಧಿಯಲ್ಲಿ ವೇತನಗಳು ಇದ್ದಲ್ಲೇ ಉಳಿದಿವೆ.

ಇದೇ ವೇಳೆ, 2011-12ರಲ್ಲಿ 10 ಮಿಲಿಯನ್ ರಷ್ಟಿದ್ದ ನಿರುದ್ಯೋಗ 2022ರಲ್ಲಿ ಸುಮಾರು 38 ಮಿಲಿಯನ್ ಗೆ ಏರಿದೆ. 

ಭಾರತದಲ್ಲಿ 2021-22ರಲ್ಲಿ 19 ಕೋಟಿ ಕಾರ್ಮಿಕರ ಗಳಿಕೆ ದಿನಕ್ಕೆ 100 ರೂ. ಮಾತ್ರ. ಅಂದರೆ ಅವರು ಅತಿ ನಿಕೃಷ್ಟ ಸ್ಥಿತಿಯಲ್ಲಿರುವ ಬಡವರು ಎಂದರ್ಥ.

2011-12ರಲ್ಲಿ ಇಂಥ ಕಾರ್ಮಿಕರ ಪ್ರಮಾಣ ಕೇವಲ 10 ಕೋಟಿ ಇತ್ತು. ಇತ್ತೀಚಿನ ದಿನಗಳಲ್ಲಿ ಬಡ ಕಾರ್ಮಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. 2021-22ರಲ್ಲಿ ದಿನಕ್ಕೆ 100ರಿಂದ 200 ರೂ. ಒಳಗೆ ಆದಾಯ ಗಳಿಸುವ ಕಾರ್ಮಿಕರ ಪ್ರಮಾಣ 14.4 ಕೋಟಿ. ಇಂಥವರನ್ನು ಬಡವರು ಮತ್ತು ದುರ್ಬಲರೆಂದು ಪರಿಗಗಣಿಸಲಾಗುತ್ತದೆ.

ಇದೇ ಸಮಯದಲ್ಲಿ ಇನ್ನೂ 12.7 ಕೋಟಿ ಕಾರ್ಮಿಕರು ದಿನಕ್ಕೆ 200ರಿಂದ 300 ರೂ. ಒಳಗಿನ ಗಳಿಕೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here