ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಬುಧವಾರ ಆಗ್ರಹಿಸಿದರು. ಬೆಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಬುಧವಾರ ಆಗ್ರಹಿಸಿದರು.
ಬುಧವಾರ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟ ಹನುಮನ ಜನ್ಮಸ್ಥಳವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ, ಮೂಲಸೌಕರ್ಯ ಇಲ್ಲ. ಅಂಜನಾದ್ರಿ ಬೆಟ್ಟವನ್ನು ಸಕಲ ಸೌಲಭ್ಯವನ್ನು ಒದಗಿಸಿ ಅಭಿವೃದ್ಧಿ ಮಾಡುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು. ಅಂಜನಾದ್ರಿ ಬೆಟ್ಟಗಳ ಅಭಿವೃದ್ಧಿಗೆ 120 ಕೋಟಿ ರೂ. ಘೋಷಣೆ ಮಾಡಿತ್ತು, ಆದರೆ ಒಂದು ರೂಪಾಯಿ ಬಿಡುಗಡೆ ಮಾಡಲಿಲ್ಲ. ಇಲ್ಲಿ ಪ್ರವಾಸಿಗರಿಗೆ ಸೂಕ್ತವಾದ ಸವಲತ್ತುಗಳಿಲ್ಲ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳಿಸಬೇಕು’ ಎಂದು ಆಗ್ರಹಿಸಿದರು.
ರಸ್ತೆ, ಶೌಚಾಲಯ, ರೋಪ್ ವೇ ಸೇರಿದಂತೆ ಹಲವು ಸೌಲಭ್ಯಗಳಿಂದ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಬಹುದಾಗಿದ್ದು, ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ ಜನ ಭೇಟಿ ನೀಡಲಿದ್ದಾರೆ. ಅಯೋಧ್ಯೆ ಅಭಿವೃದ್ಧಿಯಾಗುತ್ತಿರುವುದರಿಂದ ಹನುಮಂತನ ಜನ್ಮಸ್ಥಳವೂ ಅಭಿವೃದ್ಧಿಯಾಗಲಿದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಅಂಜನಾದ್ರಿ ಬೆಟ್ಟಗಳು ಮತ್ತು ಹಂಪಿ ಹತ್ತಿರದಲ್ಲಿರುವುದರಿಂದ ವಿಮಾನ ನಿಲ್ದಾಣವು ರಾಜ್ಯ ಮತ್ತು ದೇಶದ ಹೊರಗಿನಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ. ವಿಮಾನ ನಿಲ್ದಾಣಕ್ಕೆ 900 ಎಕರೆ ಜಾಗ ಗುರುತಿಸಲಾಗಿದ್ದು, ಗಣಿಗಾರಿಕೆ ನಿಧಿ ಲಭ್ಯವಿರುವುದರಿಂದ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲು ಹಣದ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಬಳ್ಳಾರಿ ಮತ್ತು ಅಂಜನಾದ್ರಿ ನಡುವೆ ಹಸಿರುಮಾರ್ಗವನ್ನು ಅಭಿವೃದ್ಧಿಪಡಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.