ಢಾಕಾ: ಬಾಂಗ್ಲಾದೇಶದ ದಕ್ಷಿಣ ಕರಾವಳಿ ಜಿಲ್ಲೆ ಕಾಕ್ಸ್ ಬಝಾರ್ನ ರೊಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡು 1000ಕ್ಕೂ ಅಧಿಕ ತಾತ್ಕಾಲಿಕ ವಸತಿಗಳು ಸುಟ್ಟುಹೋಗಿವೆ. ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಮತ್ತು ವಿಶ್ವಸಂಸ್ಥೆ ರವಿವಾರ ಹೇಳಿದೆ.
ಶನಿವಾರ ಮಧ್ಯರಾತ್ರಿಯ ಸಂದರ್ಭ ಉಖಿಯಾ ಪ್ರಾಂತದ ಕುತುಪಲೋಂಗ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗಾಳಿಯಿಂದಾಗಿ ಕ್ಷಿಪ್ರವಾಗಿ ಇತರ ಶಿಬಿರಗಳಿಗೂ ಹರಡಿದೆ. ಸುಮಾರು 1,040 ಟೆಂಟ್ ಗಳು ಸುಟ್ಟುಹೋಗಿವೆ. 10 ಅಗ್ನಿಶಾಮಕ ಯಂತ್ರಗಳು ಸುಮಾರು 2 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿವೆ. ಯಾವುದೇ ಜೀವಹಾನಿ ಆದ ಬಗ್ಗೆ ವರದಿಯಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಶಿಬಿರವೊಂದರಲ್ಲಿ ಹೊತ್ತಿಸಿದ್ದ ಒಲೆಯಿಂದ ಬೆಂಕಿ ಹರಡಿದೆ ಎಂದು ಅಗ್ನಿಶಾಮಕ ಘಟಕದ ಅಧಿಕಾರಿ ಶಫೀಖುಲ್ ಇಸ್ಲಾಂರನ್ನು ಉಲ್ಲೇಖಿಸಿ ‘ ದಿ ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.
ತೀವ್ರ ಗಾಳಿಯಿಂದಾಗಿ ಬೆಂಕಿ ಕ್ಷಣಮಾತ್ರದಲ್ಲಿ ಹರಡಿದ್ದು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಬಯಲು ಪ್ರದೇಶದಲ್ಲೇ ರಾತ್ರಿ ಕಳೆಯುವಂತಾಗಿದೆ ಎಂದು ವರದಿ ಹೇಳಿದೆ.