ಕಾರ್ಕಳ : ಮಠ, ಮಂದಿರ, ಬಸದಿಗಳು ಕೇವಲ ಧಾರ್ಮಿಕ ಕೇಂದ್ರವಾಗದೆ ಸಂಸ್ಕಾರ ಕೇಂದ್ರವಾಗಿದೆ. ಮಕ್ಕಳಿಗೆ ಸಮಾಜಕ್ಕೆ ಸಂಸ್ಕೃತಿಯನ್ನು ತಿಳಿಸುವ ಕೆಲಸಗಳು ಮಂದಿರಗಳಿಂದಾಗುತ್ತಿದೆ. ಕಾರ್ಕಳ ಆನೆಕೆರೆ ಬಸದಿ ಸುಂದರವಾಗಿ ಜೀರ್ಣೋದ್ದಾರಗೊಂಡಿದ್ದು ಇಡೀ ಜಗತ್ತಿನ ಜನ ಕಾರ್ಕಳದತ್ತ ತಿರುಗಿನೋಡುವಂತೆ ನಿರ್ಮಾಣವಾಗಿದೆ. ಇದು ಬರೀ ಕಾರ್ಕಳ ನಗರವಾಗಿಲ್ಲ ಬದಲಾಗಿ ಬನಾರಸ್ ನಗರದಂತೆ ಕಾಣುತ್ತಿದೆ ಎಂದು ಮುನಿಶ್ರೀ ಅಮರಕೀರ್ತಿ ಮಹಾರಾಜ್ ಹೇಳಿದರು.
ಅವರು ಕಾರ್ಕಳ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾಪನೆ ಮತ್ತು ಮೇಗಿನ ನೆಲೆಯ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ಬಾಹುಬಲಿ ಪ್ರವಚನ ಮಂದಿರದ ಭೈರವ ಅರಸು ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಆಶಿರ್ವಚನ ನೀಡಿದರು.
ಮುನಿಶ್ರೀ ಅಮೋಘಕೀರ್ತಿ ಮಹಾರಾಜ್, ಕಾರ್ಕಳ ದಾನಶಾಲೆ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ಹುಂಬುಜ ಜೈನಮಠ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ನರಸಿಂಹರಾಜಪುರ ಶ್ರೀ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ಪದ್ಮಶ್ರೀ ಮಾತಾಜಿ ಆಶಿರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ವಹಿಸಿದ್ದು, ಶಾಸಕ, ಮಾಜಿ ಸಚಿವ ವಿ.ಸುನಿಲ್ ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಕಾಪು ಕ್ಷೇತ್ರದ ಶಾಸ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಆನೆಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರಕುಮಾರ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಎಂ.ಕೆ ವಿಜಯಕುಮಾರ್ ಸ್ವಾಗತಿಸಿ, ಮುನಿರಾಜ್ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.