Home Uncategorized ಬಿಜೆಪಿಗೆ ಮರಳಿರುವ ಕುರಿತು ಜಗದೀಶ್ ಶೆಟ್ಟರ್ ಹೇಳಿದ್ದೇನು?

ಬಿಜೆಪಿಗೆ ಮರಳಿರುವ ಕುರಿತು ಜಗದೀಶ್ ಶೆಟ್ಟರ್ ಹೇಳಿದ್ದೇನು?

17
0

ಬೆಂಗಳೂರು: ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿತ್ತು. ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲವ ಪ್ರಯತ್ನಕ್ಕೆ ಅಳಿಲಸೇವೆ ಮಾಡುವೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ, ಪಕ್ಷದ ಸೂಚನೆಯಂತೆ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ʼಕಾರ್ಯಕರ್ತರ ಆಶಯ,  ರಾಜ್ಯ ನಾಯಕರ ಕರೆ, ರಾಷ್ಟ್ರೀಯ ನಾಯಕರ ಕರೆಗೆ ಸ್ಪಂದಿಸಿ ಬಿಜೆಪಿಗೆ ಮರಳಿದ್ದೇನೆ. ನೀವು ಹಿರಿಯ ನಾಯಕರು, ನಿಮಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ, ಗೌರವ ನೀಡುತ್ತೇವೆ ಎಂದು ಪಕ್ಷದ ಹಿರಿಯರು ತಿಳಿಸಿದ್ದಾರೆʼ ಎಂದು ಹೇಳಿದರು

ಕಾಂಗ್ರೆಸ್ ಪಕ್ಷ, ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ನಿನ್ನೆ ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪುನರ್ ಸೇರ್ಪಡೆ ಆಗಿದ್ದೇನೆ. ರಾಷ್ಟ್ರೀಯ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಜೊತೆ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇತರ ನಾಯಕರು ಇದ್ದರು ಎಂದರು.

ಇದು ನಮ್ಮ ಮನೆ: 

ನಾವು ಕಟ್ಟಿ ಬೆಳೆಸಿದ ಮನೆ. ನಮ್ಮ ಕುಟುಂಬ ಬಿಜೆಪಿ ಜೊತೆ ಆತ್ಮೀಯತೆ ಹೊಂದಿದೆ. ಅಸೆಂಬ್ಲಿ ಚುನಾವಣೆ ವೇಳೆ ಕೆಲವೊಂದು ಘಟನೆಗಳ ಕಾರಣ ಕಾಂಗ್ರೆಸ್ ಸೇರಿದ್ದೆ. ಆಮೇಲೆ ಎಂಎಲ್‍ಸಿ ಆದೆ. ನರೇಂದ್ರ ಮೋದಿಯವರ 10 ವರ್ಷಗಳ ದೇಶದ ಆಡಳಿತ, ಉತ್ತಮ ಕೆಲಸ ಕಾರ್ಯ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ದೃಷ್ಟಿಯಿಂದ ಹಾಗೂ ನಮ್ಮ ದೇಶವು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕೆಂಬ ಭಾರತದ ನೂರಾರು ಕೋಟಿ ಜನರ ಅಭಿಲಾಷೆಯಿದೆ. ಹೀಗಾಗಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದು ತಿಳಿಸಿದರು.

ಹುಬ್ಬಳ್ಳಿಗೆ ರಥಯಾತ್ರೆ ಬಂದಾಗ ಅದರ ಪೂರ್ತಿ ನಿರ್ವಹಣೆ ಮಾಡಿದ್ದೆ. ರಾಮಮಂದಿರ ನಿರ್ಮಾಣ, ಅಯೋಧ್ಯೆ ಹೋರಾಟದಲ್ಲಿ ಭಾಗವಹಿಸಿದ್ದೆ. ರಾಮಮಂದಿರ ನಿರ್ಮಾಣ ಧನಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡು 2 ಕೋಟಿ ಹಣ ಸಂಗ್ರಹಿಸಿದ್ದು ಎಲ್ಲರಿಗೂ ಗೊತ್ತಿದೆ. ಭವ್ಯ ರಾಮಮಂದಿರ ನಿರ್ಮಾಣದ ಕನಸು ಮೋದಿಯವರ ನೇತೃತ್ವದಲ್ಲಿ ನನಸಾಗಿದೆ ಎಂದು ವಿವರಿಸಿದರು.

ಜಗದೀಶ ಶೆಟ್ಟರ್ ಅವರ ಭೇಟಿ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ಪ್ರೀತಮ್ ಗೌಡ, ಪಿ. ರಾಜೀವ್, ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here