ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಲಿಫ್ಟ್ ಕೈಕೊಟ್ಟ ಪರಿಣಾಮ, ಸಂಸದ ಉಮೇಶ್ ಜಾಧವ್ ಸಹಿತ ಮೂವರು ಮುಖಂಡರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಲಿಫ್ಟ್ ನೊಳಗೆ ಸಿಲುಕಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಕೆಟ್ಟು ನಿಂತ ಲಿಫ್ಟ್ ನಲ್ಲೇ ಸಂಸದರು ಸೇರಿದಂತೆ ಮೂರು ಮಂದಿ ಅರ್ಧಗಂಟೆಗೂ ಹೆಚ್ಚುಕಾಲ ಸಿಲುಕಿದರು. ಕಚೇರಿ ಸಿಬ್ಬಂದಿ ಲಿಫ್ಟ್ ಸರಿಪಡಿಸಲು ಸಾಧ್ಯವಾಗದೇ, ಹತಾಶಗೊಂಡಿದ್ದರು. ಕಚೇರಿಯಲ್ಲಿ ಹಠಾತ್ ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ಲಿಫ್ಟ್ ಕೆಟ್ಟು ನಿಂತಿತ್ತು.
ವಿದ್ಯುತ್ ಮತ್ತೆ ಬಂದರೂ ಲಿಫ್ಟ್ ಕೆಲಸ ಮಾಡಲಿಲ್ಲ. ಆ ಬಳಿಕ ಲಿಫ್ಟ್ ಟೆಕ್ನಿಷಿಯನ್ ಕರೆಸಿ ಲಿಫ್ಟ್ ಸರಿಪಡಿಸಿ ಅಲ್ಲಿ ಸಿಲುಕಿಕೊಂಡ ಮೂವರ ರಕ್ಷಣೆಗೆ ಕಸರತ್ತು ನಡೆಸಲಾಯಿತು. ಕೊನೆಗೆ ಹರಸಾಹಸ ಮಾಡಿ ಲಿಫ್ಟ್ ನ ಬಾಗಿಲನ್ನು ತೆರೆದಾಗ ಲಿಫ್ಟ್ ನಲ್ಲಿ ಸಂಸದ ಉಮೇಶ್ ಜಾಧವ್ ಸಿಲುಕಿಕೊಂಡಿದ್ದರು. ಸುರಕ್ಷಿತವಾಗಿ ಲಿಫ್ಟ್ ನಿಂದ ಹೊರ ಬಂದ ಉಮೇಶ್ ಜಾಧವ್, ಟೆಕ್ನಿಷಿಯನ್ ಕೈಕುಲುಕಿ ಕೃತಜ್ಞತೆ ಸಲ್ಲಿಸಿದರು.