Home ಕರ್ನಾಟಕ ಬಿಟ್ ಕಾಯಿನ್ ಪ್ರಕರಣ | ಶ್ರೀಧರ್ ಕೆ. ಪೂಜಾರ್ ವಿರುದ್ಧದ ʼಘೋಷಿತ ಆರೋಪಿʼ ಆದೇಶವನ್ನು ರದ್ದುಪಡಿಸಿದ...

ಬಿಟ್ ಕಾಯಿನ್ ಪ್ರಕರಣ | ಶ್ರೀಧರ್ ಕೆ. ಪೂಜಾರ್ ವಿರುದ್ಧದ ʼಘೋಷಿತ ಆರೋಪಿʼ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್

36
0

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ. ಪೂಜಾರ್ ಅವರ ವಿರುದ್ಧದ ಘೋಷಿತ ಆರೋಪಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್.ಐ.ಆರ್ ಹಾಗೂ ವಿಚಾರಣಾ ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರಿದ್ದ ಏಕ ಸದಸ್ಯ ಪೀಠ, ಘೋಷಿತ ಆರೋಪಿ ಆದೇಶವನ್ನು ರದ್ದುಪಡಿಸಿದ್ದು, ಎಫ್.ಐ.ಆರ್ ರದ್ದುಗೊಳಿಸಲು ನಿರಾಕರಿಸಿದೆ ಹಾಗೂ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.

ಅಲ್ಲದೆ, ಮೇ 8ರಂದು ಬೆಳಗ್ಗೆ 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತರ 2 ಲಕ್ಷ ರೂ. ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಆರೋಪಿ ಶ್ರೀಧರ್.ಕೆ. ಪೂಜಾರ್ ಸಹಕರಿಸಬೇಕು. ಜಾಮೀನು ಅರ್ಜಿ ಸಲ್ಲಿಸಿದ್ದರೆ ಪೊಲೀಸರು ಆಕ್ಷೇಪಿಸಬಾರದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.

ವಿಚಾರಣೆ ವೇಳೆ , ಶ್ರೀಧರ್ ಕೆ. ಪೂಜಾರ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ಅರ್ಜಿದಾರರು ದೇಶದಲ್ಲಿ ಕಾನೂನು ಪಾಲಿಸುವ ನಾಗರಿಕರಾಗಿದ್ದು, ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ಆದರೆ ಇಲ್ಲಿ ರಾಜಕೀಯ ಉದ್ದೇಶಕ್ಕಾಗಿ ಅವರ ವೃತ್ತಿಪರ ಘನತೆಯನ್ನು ಹಾಳು ಮಾಡುವ ಸಲುವಾಗಿ ಪ್ರಕರಣದಲ್ಲಿ ಅವರನ್ನು ಆರೋಪಿ ಎಂಬಂತೆ ಬಿಂಬಿಸಲಾಗಿದೆ. ಮಧ್ಯಂತರ ಆದೇಶದ ಮೇರೆಗೆ ಅರ್ಜಿದಾರರು ವಿಚಾರಣೆಗೆ ಹಾಜರಾಗಿದ್ದು, ತನಿಖೆಗೂ ಸಹಕರಿಸಿದ್ದಾರೆ ಆದರೆ ಪ್ರತಿವಾದಿಗಳು ಅವರು ತನಿಖೆಗೆ ಹಾಜರಾಗಿಲ್ಲ ಎಂದಿರುವುದು ಆಧಾರ ರಹಿತ ಆಪಾದನೆ. ಜತೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡದೆ ವಾರೆಂಟ್ ಜಾರಿಗೊಳಿಸಿದ್ದು, ಕಾನೂನಿಗೆ ವಿರುದ್ಧವಾದ ನಡೆ. ಭಾರತದ ಸಂವಿಧಾನದ 19 ಮತ್ತು 21 ನೇ ವಿಧಿಯ ಅಡಿಯಲ್ಲಿ ಅರ್ಜಿದಾರರು ಇದು ನ್ಯಾಯ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಖಾತರಿಪಡಿಸುತ್ತದೆ.

ಹಾಗಾಗಿ ಅರ್ಜಿದಾರರ ವಿರುದ್ಧ ಪ್ರಕರಣಗಳನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದ್ದು, ಮುಂದಿನ ಎಲ್ಲ ಹಂತದ ತನಿಖೆಗೂ ಆರೋಪಿಗಳು ಸಹಕರಿಸುವಂತೆ ಭರವಸೆ ನೀಡಿದ್ದರು.

ಏನಿದು ಪ್ರಕರಣ?

ಬಿಟ್ ಕಾಯಿನ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ತಂಡದಲ್ಲಿ ಶ್ರೀಧರ್ ಪೂಜಾರಿ ಕೂಡ ಇದ್ದರು. ಈ ವೇಳೆ ಅಕ್ರಮ ಎಸಗಿರುವ ಆರೋಪ ಕೇಳಿಬಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್‌ಐಟಿ ಫೆ. 17 ರಂದು ಶ್ರೀಧರ್ ಪೂಜಾರಿ ಬಂಧನಕ್ಕೆ ಮುಂದಾಗಿತ್ತು. ಈ ವೇಳೆ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ ಶ್ರೀಧರ್ ಪೂಜಾರಿ ಪರಾರಿಯಾಗಿದ್ದರು.

LEAVE A REPLY

Please enter your comment!
Please enter your name here