ಹಲವು ಅಡತೆಡೆಗಳಿಂದಾಗಿ ಕಳೆದ 7 ವರ್ಷಗಳಿಂದ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗದ ಬಿಬಿಎಂಪಿಗೆ ಈ ವರ್ಷ ಕೂಡ ವಿಧಾನಸಭಾ ಚುನಾವಣೆ ಅಡ್ಡಿಯಾಗಿದೆ. ಬೆಂಗಳೂರು: ಹಲವು ಅಡತೆಡೆಗಳಿಂದಾಗಿ ಕಳೆದ 7 ವರ್ಷಗಳಿಂದ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗದ ಬಿಬಿಎಂಪಿಗೆ ಈ ವರ್ಷ ಕೂಡ ವಿಧಾನಸಭಾ ಚುನಾವಣೆ ಅಡ್ಡಿಯಾಗಿದೆ.
ಏಳು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆಯನ್ನು ಪರಿಷ್ಕರಿಸಿಲ್ಲ. ಆಸ್ತಿಗಳ ನೋಂದಣಿಯ ಮಾರ್ಗಸೂಚಿ ಬೆಲೆಯನ್ನು 2019 ರಲ್ಲಿ ಕಂದಾಯ ಇಲಾಖೆಯು ಕೊನೆಯದಾಗಿ ಪರಿಷ್ಕರಿಸಿತ್ತು
ಚುನಾವಣೆ ಕಾರಣದ ಈ ವರ್ಷ ಕೂಡ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ತಿ ತೆರಿಗೆ ಪರಿಷ್ಕರಣೆ ಕೈಗೊಳ್ಳಲು ಅನುಮತಿ ನೀಡುವಂತೆ ಕಳೆದ ಫೆಬ್ರವರಿ ತಿಂಗಳಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಇದಲ್ಲದೇ, ಇಲಾಖೆಯ ಕೆಲವು ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯತಿ ನೀಡುವಂತೆ ಮತ್ತೊಂದು ಮನವಿ ಮಾಡಲಾಗಿತ್ತು, ಆದರೆ, ಇದಕ್ಕೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿಸಿದ್ದಾರೆ.
“ಸಾಂಕ್ರಾಮಿಕ ರೋಗದ ಬಳಿಕ ರಾಜ್ಯದಾದ್ಯಂತ ಆಸ್ತಿ ಮೌಲ್ಯಗಳು ಗಗನಕ್ಕೇರಿವೆ. ಖಾಸಗಿ ಆಸ್ತಿಗಳ ಬೆಲೆಗಳು ಹೆಚ್ಚಾಗಿವೆ, ಆದರೆ, ಮಾರ್ಗಸೂಚಿ ಬೆಲೆಯು ತುಂಬಾ ಕಡಿಮೆಯಾಗಿದೆ. ಖಾಸಗಿ ಆಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವು ಮೂರನೇ ಒಂದು ಭಾಗದಷ್ಟಿದೆ. ಹೀಗಾಗಿ ವಾರ್ಷಿಕ ಪರಿಷ್ಕರಣೆ ಅತ್ಯಗತ್ಯವಿದೆ. ಆದರೆ ,ಅದನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿಬ್ಬಂದಿ ಕೊರತೆಯಿಂದ ಮಾರ್ಗಸೂಚಿ ಬೆಲೆಗಳ ಪರಿಷ್ಕರಣೆ ಸಾಧ್ಯವಾಗಿಲ್ಲ. ಪ್ರಸ್ತುತ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಜೂನ್ನಲ್ಲಿ ಕಾವೇರಿ-2 ಪೋರ್ಟಲ್ ಪ್ರಾರಂಭಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, “ಆಸ್ತಿ ತೆರಿಗೆಯ ಪರಿಷ್ಕರಣೆಯು ವಾರ್ಷಿಕ ಕಸರತ್ತಾಗಿದೆ. ಆದರೆ, ಹಲವು ವರ್ಷಗಳಿಂದ ರಾಜಕೀಯ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈ ವರ್ಷ ಕೂಡ ಪರಿಷ್ಕರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಆದಾಯ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ತೆರಿಗೆ ವ್ಯವಸ್ಥೆಗಳು ಮತ್ತು ಪರಿಷ್ಕರಣೆಗಳು ಅತ್ಯಗತ್ಯ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಇದು ಸರ್ಕಾರಿ ಸಂಸ್ಥೆಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

 
         
        