ಸತತ ಮೂರು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಸದ ಕಾರಣ ಬೆಂಗಳೂರು ನಗರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿಯವರು ಸೋಮವಾರ ಹೇಳಿದರು. ಬೆಂಗಳೂರು: ಸತತ ಮೂರು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಸದ ಕಾರಣ ಬೆಂಗಳೂರು ನಗರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿಯವರು ಸೋಮವಾರ ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಇದೀಗ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಇದರಂತೆ ಚುನಾವಣೆಗೆ ಸಿದ್ಧತೆಗಳನ್ನೂ ಆರಂಭಿಸಿದೆ. ನಿನ್ನೆಯಷ್ಟೇ ರಾಮಲಿಂಗಾ ರೆಡ್ಡಿಯವರು ಚುನಾವಣೆಗೆ ಪೂರ್ವ ಸಿದ್ಧತೆಗಳಿಗಾಗಿ ಅಧಿಕಾರಿಗಳು, ಸದಸ್ಯರೊಂದಿಗೆ ಸಭೆ ನಡೆಸಿ, ಸಲಹೆಗಳ ಸ್ವೀಕರಿಸಿದರು.
ಸಭೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾಯಿತ ಸಂಸ್ಥೆ ಇಲ್ಲದ ಕಾರಣ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹಲವು ಸದಸ್ಯರು ಶೀಘ್ರಗತಿ ಚುನಾವಣೆ ನಡೆಯಬೇಕೆಂದು ಬಯಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅದನ್ನೇ ಬಯಸುತ್ತಿದ್ದಾರೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ಈ ನಡುವೆ ಬೆಂಗಳೂರಿನ ಕಾಂಗ್ರೆಸ್ ನಾಯಕರಿಗೆ ಚುನಾವಣೆಗೆ ಸಿದ್ಧರಾಗುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರಕಾರ ಹಲವು ವಾರ್ಡ್‌ಗಳನ್ನು ತೆಗೆದು ಅನ್ಯಾಯ ಮಾಡಿದೆ ಎಂದು ಸಭೆಯಲ್ಲಿ ಹಲವು ಸದಸ್ಯರು ಹೇಳಿದರು. ಹಿಂದಿನ ಸರ್ಕಾರವು ವಿಂಗಡಣೆಯ ನೆಪದಲ್ಲಿ ಹಲವು ವಾರ್ಡ್‌ಗಳನ್ನು ಬದಲಿಸಿದೆ. ಗಾಂಧಿನಗರದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಎಲ್ಲಾ ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮೀಸಲಾತಿ ಮಾತೃಕೆ ಆಧರಿಸಿ ಸರ್ಕಾರ ನವೆಂಬರ್‌ನಲ್ಲಿ ಚುನಾವಣೆ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ. ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಜೊತೆಗೆ ಮೀಸಲಾತಿಯ ಕುರಿತಂತೆಯೂ ಕೆಲಸ ಮಾಡುತ್ತದೆ. ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಮತ್ತೊಂದು ಸಭೆ ನಡೆಯಲಿದೆ ಎಂದು ತಿಳಿಸಿದರು.