Home Uncategorized ಬೀದರ್​: ಬರಡು ಭೂಮಿಯಲ್ಲಿ ಸೀಬೆ ಬೆಳೆದು ಸೈ ಎನಿಸಿಕೊಂಡ ಯುವ ರೈತ 

ಬೀದರ್​: ಬರಡು ಭೂಮಿಯಲ್ಲಿ ಸೀಬೆ ಬೆಳೆದು ಸೈ ಎನಿಸಿಕೊಂಡ ಯುವ ರೈತ 

83
0

ಬೀದರ್​: ನಾಲ್ಕು ಎಕರೆಗಳಷ್ಟು ಬರಡು ಭೂಮಿಯಲ್ಲಿ ದೇಶಿ ಪೇರಲೆ ಬೆಳೆದು ತಿಂಗಳಿಗೆ 1 ಲಕ್ಷ ರೂಪಾಯಿ ಆದಾಯ ಪಡೆಯುತ್ತಿರುವ ಯುವ ರೈತ ನರೇನ್.  ಸಪೇದಾ ಲಕ್ನೋ ಹಾಗೂ ಲಕ್ನೋ 49 ಎಂಬ ಎರಡು ತಳಿಯ ಪೇರಲೆ ಗಿಡಗಳನ್ನು ಆಂಧ್ರಪ್ರದೇಶದ ಸದಾಶಿವಪೇಠ್​ದಿಂದ ಒಂದು ಗಿಡಕ್ಕೆ 45 ರೂಪಾಯಿಯಂತೆ 1,800 ಗಿಡಗಳನ್ನು ತಂದು ನಾಟಿ ಮಾಡಿದ್ದರು. ಮಾರ್ಚ್​ನಲ್ಲಿ ಚಿಗುರು ಬಿಟ್ಟು ಹೂವು ನೀಡಲಾರಂಭಿಸಿತ್ತು. ಈಗ ನವೆಂಬರ್​ನಿಂದ ಸೀಬೆ ಕಟಾವಿಗೆ ಬಂದಿದ್ದು ಪ್ರತಿದಿನವೂ ಕೂಡಾ ಮಾರಾಟ ಮಾಡುತ್ತಿದ್ದಾರೆ. ಹಣ್ಣು ಸಿಹಿಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ ಎನ್ನುತ್ತಾರೆ ರೈತರು.

ಈ ಹಣ್ಣಿನಲ್ಲಿ ಬೀಜ ಕಡಿಮೆ‌, ರುಚಿ ಹೆಚ್ಚು. ಈ ಹಿನ್ನೆಲೆಯಲ್ಲಿ ಇವರು ಬೆಳೆಯುವ ದೇಶಿ ಪೇರಲಕ್ಕೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯಿದೆ. ಮಹಾರಾಷ್ಟ್ರ, ತಮಿಳುನಾಡು, ಹೈದರಾಬಾದ್‌ಗೆ ಹೋಲಿಸಿದರೆ ಗಡಿ ಜಿಲ್ಲೆ ಬೀದರ್​ನಲ್ಲಿ ಸೀಬೆ ಬೆಳೆಯುವವರ ಪ್ರಮಾಣ ತುಂಬಾ ಕಡಿಮೆ. ಜಿಲ್ಲೆಗೆ ಪ್ರತಿ ವರ್ಷ ಟನ್‌ಗಟ್ಟಲೆ ಸೀಬೆ ಹೊರ ರಾಜ್ಯಗಳಿಂದ ಆಮದಾಗುತ್ತಿದೆ. ಸೀಬೆ ಬೆಳೆಯುವುದು ಅಷ್ಟು ಸುಲಭವಲ್ಲ. ಮಾಹಿತಿ, ಮಾರ್ಗದರ್ಶನದೊಂದಿಗೆ ಬಂಡವಾಳವೂ ಬೇಕು. ಗೊಬ್ಬರ, ನೀರಾವರಿಯ ವ್ಯವಸ್ಥೆಗಳಿರಬೇಕು ಎನ್ನುತ್ತಾರೆ ನರೇನ್.

ಇನ್ನೂ ಈ ಗಿಡಗಳನ್ನು ಬರಡು ಭೂಮಿಯಲ್ಲಿ, ಕಲ್ಲು ಬಂಡೆಗಳಿಂದ ಕೂಡಿದ ಜಮೀನನ್ನು ಜೆಸಿಬಿ ಮೂಲಕ ಹದ ಮಾಡಿ ಜೆಸಿಬಿಯಿಂದಲೇ ಗುಂಡಿ ತೋಡಿ ಅದಕ್ಕೆ ಜಾನುವಾರುಗಳ ಗೊಬ್ಬರ ಹಾಕಿ ಮುತೂವರ್ಜಿ ವಹಿಸಿ ಗಿಡಗಳನ್ನು ಬೆಳೆಸಲಾಗಿದೆ. ಗಿಡ ನೆಟ್ಟು ಐದು ವರ್ಷಗಳು ಕೆಳೆದಿದ್ದು, ಈಗ ಎರಡನೇ ಕಟಾವಿಗೆ ಬಂದಿದೆ. ಸಪೇದಾ ಲಕ್ನೋ ಹಾಗೂ ಲಕ್ನೋ 49, ಎಂಬ ಎರಡು ತಳಿ, ಉತ್ತಮ ಇಳುವರಿ ಕೊಡುವ ತಳಿಯಾಗಿದ್ದು, ಒಂದು ಗಿಡಕ್ಕೆ ನೂರರವರೆಗೆ ಹಣ್ಣುಗಳು ಬಿಟ್ಟಿವೆ. ಇನ್ನು ಈ ರೈತನಿಗೆ ಮಾರುಕಟ್ಟೆ ಸಮಸ್ಯೆಯಾಗಿಲ್ಲ. ಬೀದರ್ ಹಾಗೂ ಹೈದ್ರಾಬಾದ್​ಗೆ ಇವರು ಬೆಳೆಸಿದ ಸೀಬೆಯನ್ನ ಮಾರಾಟ ಮಾಡಲಾಗಿದ್ದು, ಚಿಲ್ಲರೆ ವ್ಯಾಪಾರಿಗಳು ಇವರ ಹೊಲಕ್ಕೆ ನೇರವಾಗಿಯೇ ಬಂದು ಪೇರಲವನ್ನು ಖರೀದಿಸಿಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಇನ್ನು ಸೀಬೆ ಹಣ್ಣನ್ನು ಬೆಳೆಯಲು ಖರ್ಚು ಕಡಿಮೆ, ನಿರ್ವಹಣೆಯೂ ಸುಲಭವಾಗಿದೆ. ಎಂಥಹ ಭೂಮಿಯಲ್ಲಾದರು, ಕಡಿಮೆ ನೀರಿದ್ದರು ಕೂಡ ಪೇರಲ ಗಿಡವನ್ನು 10 ವರ್ಷಗಳ ಕಾಲ ಬೆಳೆಯಬಹುದು. ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೊಳೆ ರೋಗ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊಂಚಮಟ್ಟಿಗೆ ನಿಗಾ ವಹಿಸಿದರೆ ಸಾಕು ಉತ್ತಮ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ಯುವ ರೈತ ನರೇನ್.

ಇದನ್ನೂ ಓದಿ:ಬೀದರ್: ಹುಮ್ನಾಬಾದ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬೆಂಕಿ, ಲಕ್ಷಾಂತರ ರೂ. ಬೆಳೆ ನಾಶ

ಕಡಿಮೆ ನೀರನ್ನು ಬಳಸಿಕೊಂಡು ಬರಡು ಭೂಮಿಯಲ್ಲಿ ಕೃಷಿ ಮಾಡುವುದು ಹೇಗೆ ಅನ್ನುವುದನ್ನು ನರೇನ್ ತೋರಿಸಿಕೊಟ್ಟಿದ್ದಾರೆ. ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದ್ದರೆ ಇನ್ನೊಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ತೋರಿಸಿದ್ದಾರೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

LEAVE A REPLY

Please enter your comment!
Please enter your name here