ಬೀದರ್, ಫೆ.28: ಟ್ರಕ್ ಹಾಗೂ ಟಾಟಾ ಏಸ್ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆ ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ಇಂದು ಮುಂಜಾನೆ ನಡೆದಿದೆ.
ದಸ್ತಗೀರ್ ದಾವಲ್ ಸಾಬ್ (36), ರಶೀದಾ ಶೇಕ್ (41), ಟಾಟಾ ಏಸಿ ಚಾಲಕ ವಲಿ (31) ಮತ್ತು ಅಮಾನ್ ಶೇಕ್ (51) ಮೃತಪಟ್ಟವರು. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳೆಲ್ಲ ಮಹಾರಾಷ್ಟ್ರದ ಉಗ್ಗಿರ್ ಮೂಲದರಾಗಿದ್ದು, ಹೈದರಾಬಾದ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಇಂದು ಮುಂಜಾನೆ 4:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಟಾಟಾ ಏಸ್ ವಾಹನದಲ್ಲಿ ಒಟ್ಟು 14 ಮಂದಿ ಉಗ್ಗಿರ್ ನಿಂದಾ ಹೈದರಾಬಾದ್ ಗೆ ತೆರಳುತ್ತಿದ್ದ ವೇಳೆ ಬೀದರ್ನಿಂದ ಭಾಲ್ಕಿ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಬೀದರ್ ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ದನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.