ಬಳ್ಳಾರಿ: ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿ (street dogs attack) ಹೆಚ್ಚಾಗಿದೆ. ಬೀದಿ ನಾಯಿಗಳ ಅಟ್ಟಹಾಸದಿಂದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಹಲವು ಮಕ್ಕಳು ಪ್ರಾಣ ತೆತ್ತಿದ್ದಾರೆ. ಬೀದಿನಾಯಿಗಳ ಅಟ್ಟಹಾಸಕ್ಕೆ ಜನರು ನಲುಗುತ್ತಿದ್ದರೆ, ದಾಳಿಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆಯಲೆಂದು ಆಸ್ಪತ್ರೆಗೆ ಹೋದರೆ ಅಲ್ಲೂ ಔಷಧಿ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ವಿಮ್ಸ್ ಆಸ್ಪತ್ರೆ (VIMS Hospital)ಯಲ್ಲಿ ನಾಯಿ ಕಡಿತಕ್ಕೆ ಚುಚುಮದ್ದು ಸಹ ಸಿಗದೇ ಜನರು ಪರದಾಡುವಂತಾಗಿದೆ. ಡೆಡ್ಲಿ ಡಾಗ್ ಅಟ್ಯಾಕ್ಗೆ ಬಳ್ಳಾರಿಯ ಮಕ್ಕಳು ಬಲಿಯಾಗಿದ್ದಾರೆ. ದಾಳಿಗೆ ಒಳಗಾದವರ ನರಳಾಟ ಹೇಳತೀರದು. ಆಸ್ಪತ್ರೆಯಲ್ಲೂಬ ಸರಿಯಾದ ಸರಿಯಾದ ಔಷಧಿ ಮತ್ತು ಚಿಕಿತ್ಸೆ ಸಿಗುತ್ತಿಲ್ಲ. ಮಕ್ಕಳನ್ನ ಮನೆಯಿಂದ ಆಚೇ ಕಳಿಸಲೂ ಪೋಷಕರು ಭಯ ಪಡುತ್ತಿದ್ದಾರೆ.
ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಸೇರಿದಂತೆ ಪಕ್ಕದ ಆಂದ್ರಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ ಸದ್ಯ ವಿಮ್ಸ್ ಆಸ್ಪತ್ರೆಯಲ್ಲಿ ಬೀದಿನಾಯಿಗಳ ಕಡಿತಕ್ಕೆ ತುತ್ತಾದವರಿಗೆ ಚುಚ್ಚುಮದ್ದು ಸಹ ಸಿಗುತ್ತಿಲ್ಲ. ನಾಯಿ ಕಡಿತದ ನಂತರ ಇಂಜೇಕ್ಷನ್ ಪಡೆಯಲು ಆಸ್ಪತ್ರೆಗೆ ಬಂದರೆ ವೈದ್ಯರು ಹೊರಗಡೆಯಿಂದ ಔಷಧಿ ಖರೀದಿಸುವಂತೆ ಚೀಟಿ ನೀಡುತ್ತಿರುವುದು ರೋಗಿಗಳು ಮತ್ತು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದಾವಣಗೆರೆ: ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರೂ ಓಡಾಡಲು ಸರಿಯಾದ ಸೇತುವೆ ಇಲ್ಲದೇ ಪರದಾಡುತ್ತಿರುವ ಸಾರ್ವಜನಿಕರು
ನಾಯಿ ದಾಳಿಗೆ ಒಳಗಾದ ನನ್ನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ, ಇಲ್ಲಿ ಚುಚ್ಚುಮದ್ದು ಇಲ್ಲ. ಬೆಂಗಳೂರಿಗೆ ಕರೆದುಕೊಂಡು ಹೋಗಿ, ಅಲ್ಲಿ ಚುಚ್ಚುಮದ್ದು ಸಿಗುತ್ತದೆ. ಇಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದರೆ ನನ್ನ ಮಗಳು ಬದುಕುತ್ತಿದ್ದಳು ಎಂದು ನಾಯಿ ಕಡಿತದಿಂದ ತನ್ನ ಮಗು ಕಳೆದಕೊಂಡ ತಾಯಿ ಗಾಯತ್ರಿ ಅಳಲು ತೋಡಿಕೊಂಡಿದ್ದಾರೆ.
ನಾಯಿ ಕಡಿತದ ನಂತರ ಚಿಕಿತ್ಸೆಗಾಗಿ ಚುಚ್ಚುಮದ್ದು ಪಡೆಯಲು ನಿತ್ಯ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹತ್ತಾರು ಜನರು ಆಗಮಿಸುತ್ತಾರೆ. ಆದರೆ ವಿಮ್ಸ್ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ನೀಡುವ ರೆಬಿ-4 ಚುಚುಮದ್ದು ಸಾಕ್ಟ್ ಇಲ್ಲ ಅಂತಾ ವಿಮ್ಸ್ ಸಿಬ್ಬಂದಿ ಹೊರಗಡೆ ಚೀಟಿ ಬರೆದುಕೊಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ ಪಕ್ಷ ಚುಚ್ಚುಮದ್ದು ಸಹ ಸಿಗದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಟ್ಯಾಂತರ ರೂಪಾಯಿ ಹಣವನ್ನ ಔಷಧಿ ಖರೀದಿಗೆ ಖರ್ಚು ಮಾಡುವ ವಿಮ್ಸ್ ಆಸ್ಪತ್ರೆ ನಾಯಿ ಕಡಿತಕ್ಕೆ ಚುಚ್ಚುಮದ್ದು ಸಹ ನೀಡಿದಿರುವುದು ಅನುಮಾನಕ್ಕೆ ಕಾರಣವಾಗಿದೆ. ಔಷಧಿ ಇಲ್ಲವಲ್ಲ ಅಂತಾ ವಿಮ್ಸ್ ನಿರ್ದೇಶಕರನ್ನ ಪ್ರಶ್ನೆ ಮಾಡಿದರೆ ಅವರು ಹೇಳುವುದೇ ಬೇರೆ. ಹೊರಗಡೆ ಚೀಟಿ ಬರೆದುಕೊಟ್ಟ ಬಗ್ಗೆ ಮಾಹಿತಿ ಇಲ್ಲ. ಆದರೆ ನಮ್ಮಲ್ಲಿ ರೆಬಿ-4 ಚುಚ್ಚುಮದ್ದು ಸಾಕಷ್ಟಿದೆ ಎಂದು ಹೇಳುತ್ತಿದ್ದಾರೆ.
ಒಂದೆಡೆ ಬೀದಿನಾಯಿ, ಹುಚ್ಚು ನಾಯಿಗಳ ಅಟ್ಟಹಾಸಕ್ಕೆ ಬಳ್ಳಾರಿ ಜನರು ನಲುಗಿ ಹೋಗಿದ್ದರೆ ಇನ್ನೊಂದೆಡೆ ನಾಯಿ ಕಡಿತಕ್ಕೆ ಚಿಕಿತ್ಸೆ ಚುಚ್ಚುಮದ್ದು ನೀಡಬೇಕಾದ ಆಸ್ಪತ್ರೆಯಲ್ಲಿ ಇಂಜೇಕ್ಷನ್ ದೊರೆಯದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನಾದರೂ ಸರ್ಕಾರ ಕನಿಷ್ಟ ಪಕ್ಷ ಬೀದಿನಾಯಿಗಳ ಕಡಿತಕ್ಕೆ ಒಳಗಾದವರಿಗೆ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಸರ್ಕಾರಿ ಆಸ್ಪತ್ರೆಗಳು ಇದ್ದರೂ ಇಲ್ಲದಂತಾಗುತ್ತದೆ.
ವರದಿ: ವೀರೇಶ್ ದಾನಿ, ಟಿವಿ9 ಬಳ್ಳಾರಿ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ