ಬೀದಿ ನಾಯಿಗಳ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದ ಹೇಳಿಕೆಗೆ ಪ್ರಾಣಿ ಪ್ರಿಯರು ಖಂಡನೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು: ಬೀದಿ ನಾಯಿಗಳ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದ ಹೇಳಿಕೆಗೆ ಪ್ರಾಣಿ ಪ್ರಿಯರು ಖಂಡನೆ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರತಾಪ್ ಸಿಂಹ ಅವರು, ನೀವು (ಮಾಧ್ಯಮ) ಬೀದಿ ನಾಯಿಗಳ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸಿ ಮತ್ತು ಮೌನವಾಗಿರಿ, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿಕೊಡಿ. ಪ್ರಾಣಿ ಪ್ರಿಯರಿಂದಾಗಿ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಬೀದಿ ನಾಯಿಗಳು ತಮ್ಮ ಮಕ್ಕಳನ್ನು ಕಚ್ಚಿದಾಗ ಅವರಿಗೆ ಸಮಸ್ಯೆಯ ಅರಿವಾಗುತ್ತದೆ. ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ಆ ಕೆಲಸವನ್ನು ಅವರು ಅಂದುಕೊಳ್ಳುವಂತೆ ದೊಡ್ಡ ಸಾಮಾಜಿಕ ಸೇವೆಯೂ ಅಲ್ಲ. ಸಮಸ್ಯೆ ಬಗೆಹರಿಸಲು ಬೀದಿ ನಾಯಿಗಳನ್ನು ಕೊಲ್ಲಬೇಕು’ ಎಂದು ಹೇಳಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡಿರುವ ನಟಿ ಮತ್ತು ಶ್ವಾನ ಪ್ರೇಮಿ ಸಂಯುಕ್ತಾ ಹೊರ್ನಾಡ್ ಅವರು, “ಕಾನೂನು ಪ್ರಕಾರ, ಭಾರತದಲ್ಲಿ ಕೊಲ್ಲುವುದು ಕಾನೂನುಬಾಹಿರ. ಶಾಸಕರಾಗಲೀ, ಯಾರೇ ಆಗಲೀ ಇಂತರ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಹೇಳಿದ್ದಾರೆ.
ನಾಯಿಗಳನ್ನು ನಿಯಂತ್ರಣದಲ್ಲಿಡಲು ಅತ್ಯಂತ ಮಾನವೀಯ ಮಾರ್ಗವೆಂದರೆ ಅವುಗಳಿಗೆ ಲಸಿಕೆಗಳನ್ನು ನೀಡುವುದಾಗಿದೆ. ಇದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ನಾಯಿಗಳ ಸಂಖ್ಯೆ ಹೆಚ್ಚಾಗುವುದು ಅಪಾಯ ಎಂಬುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಾಯಿ ಪ್ರಿಯರೂ ಕೂಡ ಆಹಾರ ನೀಡುವುದು ಮತ್ತು ಜವಾಬ್ದಾರಿಯುತ ಆಹಾರ ನೀಡುವುದರ ನಡುವೆ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾಯಿಗಳಿಗೆ ಆಹಾರ ನೀಡುತ್ತಿರುವವರು ಅವುಗಳಿಗೆ ಲಸಿಕೆ ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
ಬಳಿಕ ಪ್ರತಾಪ್ ಸಿಂಹ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಇದು ಅನೈತಿಕ ಮತ್ತು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅರುಣ್ ಪ್ರಸಾದ್ ಅವರು ಮಾತನಾಡಿ, ಡಾಗ್ ರೂಲ್ಸ್ 2001 ಗೆಜೆಟ್ ನೋಟಿಫಿಕೇಶನ್ ಮತ್ತು ಎಸ್‌ಎಲ್‌ಪಿ 691/2009 ರಲ್ಲಿ ಸುಪ್ರೀಂಕೋರ್ಟ್ ಆದೇಶದ ಅಡಿಯಲ್ಲಿ, ಗೋಹತ್ಯೆ ಕಾನೂನುಬಾಹಿರವಾಗಿದೆ ಎಂದು ತಿಳಿಸಿದ್ದಾರೆ.
“ಪ್ರಾಣಿಗಳ ಜನನ ನಿಯಂತ್ರಣಕ್ಕಾಗಿ, ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ ಅಥವಾ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುವಂತಿಲ್ಲ. ಹಾಗಾಗಿ, ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ, ಇಂತಹ ಹೇಳಿಕೆ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
ಹೋರಾಟಗಾರ್ತಿ ನವೀನ ಕಾಮತ್ ಮಾತನಾಡಿ, ಸರಕಾರದ ಆದೇಶ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾದ ಇಂತಹ ಹೇಳಿಕೆಗಳನ್ನು ಸಂಸದರು ನೀಡಬಾರದು ಎಂದು ಹೇಳಿದ್ದಾರೆ.