ರಾಜ್ಯ ರಾಜಧಾನಿ ಬೆಂಗಳೂರ ನಗರವನ್ನು ‘ಉಡ್ತಾ ಪಂಜಾಬ್’ ಆಗಲು ಬಿಡುವುದಿಲ್ಲ. ಮಾದಕ ದ್ರವ್ಯ ಕಳ್ಳಸಾಗಾಣೆ, ಮಾರಾಟ ದಂಧೆಯನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಗುಡುಗಿದರು. ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರ ನಗರವನ್ನು ‘ಉಡ್ತಾ ಪಂಜಾಬ್’ ಆಗಲು ಬಿಡುವುದಿಲ್ಲ. ಮಾದಕ ದ್ರವ್ಯ ಕಳ್ಳಸಾಗಾಣೆ, ಮಾರಾಟ ದಂಧೆಯನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಗುಡುಗಿದರು.
ವಿಧಾನಸಭೆಯಲ್ಲಿ ಆನೆಗುಂದಿ ಮತ್ತು ಹಂಪಿಯಲ್ಲಿ ಡ್ರಗ್ಸ್ ಮಾಫಿಯಾ ಸಕ್ರಿಯವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದರು. ಇದಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಗೃಹ ಸಚಿವರು, ಡ್ರಗ್ಸ್ ಹಾವಳಿ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ರಾಜ್ಯ ಮತ್ತು ದೇಶದ ಸಮಸ್ಯೆಯಾಗಿದ್ದು, ಈ ಹಾವಳಿಯಿಂದ ರಾಜ್ಯವನ್ನು ಮುಕ್ತಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇತ್ತೀಚೆಗೆ ಮಂಗಳೂರು ನಗರವನ್ನು ಮಾದಕ ದ್ರವ್ಯ ಹಾವಳಿಯಿಂದ ಮುಕ್ತಗೊಳಿಸಲು ಮಂಗಳೂರು ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಮಾತುಕತೆ ನಡೆಸಿದ್ದೇನೆ. ಪಂಜಾಬ್ ವಿಷಯದಲ್ಲಿ ನಡೆದಂತೆ ರಾಜ್ಯ ಮತ್ತು ಬೆಂಗಳೂರಿಗೆ ಮಾನಹಾನಿಯಾಗಲು ಎಂದಿಗೂ ಬಿಡುವುದಿಲ್ಲ, ಬೆಂಗಳೂರನ್ನು ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಗಂಗಾವತಿ ಪ್ರದೇಶದಲ್ಲಿ ಡ್ರಗ್ಸ್ ಮತ್ತು ವೇಶ್ಯಾವಾಟಿಕೆ ವ್ಯಾಪಕವಾಗಿದೆ ಎಂದು ರಾಯರೆಡ್ಡಿ ಅವರು ಆರೋಪಿಸಿದರು. ಈ ಹೇಳಿಕೆ ಸಂಬಂಧ ರಾಯರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ನಡುವೆ ಸದನದಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು.