ಬೆಂಗಳೂರು: ಕಾಂಬೋಡಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಫೆಬ್ರವರಿ 16 ರಂದು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ ಮಲೇಷ್ಯಾವನ್ನು ಸೋಲಿಸಿದ ಭಾರತ ತಂಡ, 25-23, 23-25, 25-21 ಅಂತರದಲ್ಲಿ ಜಯಗಳಿಸಿತು. ಬೆಂಗಳೂರಿನ ಎಂಡೀವರ್ಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚಂದನ್ ರೆಡ್ಡಿ ಸಹ ತಂಡದಲ್ಲಿದ್ದಾರೆ.
ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಬೆಂಬಲಿಗರು ತಂಡವನ್ನು ಬರಮಾಡಿಕೊಂಡರು. ಶಾಲೆಯ ಅಧ್ಯಕ್ಷ ಎಂ.ಎಲ್. ಶಿವಶಂಕರ್ ಅವರು ಕ್ರೀಡಾಪಟುಗಳನ್ನು ಅಭಿನಂದಿಸಿ, ಗೌರವಿಸಿದರು.
ನಂತರ ಭಾರತ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪಂದ್ಯಾವಳಿಯ ಅನುಭವವನ್ನು ಹಂಚಿಕೊಂಡಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ತಂಡವನ್ನು ಅಭಿನಂದಿಸಿದರು.
