ಭಾರತದಲ್ಲಿ ಅಕ್ರಮವಾಗಿ ನೆಲೆಸಲು ತನ್ನ ಗುರುತನ್ನು ನಕಲಿ ಮಾಡಿದ್ದ 19 ವರ್ಷದ ಪಾಕಿಸ್ತಾನಿ ಯುವತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬೆಂಗಳೂರು: ಭಾರತದಲ್ಲಿ ಅಕ್ರಮವಾಗಿ ನೆಲೆಸಲು ತನ್ನ ಗುರುತನ್ನು ನಕಲಿ ಮಾಡಿದ್ದ 19 ವರ್ಷದ ಪಾಕಿಸ್ತಾನಿ ಯುವತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಇಕ್ರಾ ಜೀವನಿ ಎಂಬಾಕೆಯನ್ನು ಬಂಧಿಸಿರುವ ಪೊಲೀಸರು, ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಇಕ್ರಾ ಅವರನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ.
ಪಾಕಿಸ್ತಾನದ ನಿವಾಸಿ ಇಕ್ರಾ, ಕೆಲ ತಿಂಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ (25) ಅವರನ್ನು ಪರಿಚಯ ಮಾಡಿ ಕೊಂಡಿದ್ದರು. ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2022ರಲ್ಲಿ ನೇಪಾಳದ ಗಡಿ ಮೂಲಕ ದೇಶದೊಳಗೆ ನುಸುಳಿದ್ದ ಇಕ್ರಾ, ಮುಲಾಯಂಸಿಂಗ್ ಅವರನ್ನು ಮದುವೆಯಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
25 ವರ್ಷದ ಭದ್ರತಾ ಸಿಬ್ಬಂದಿ ಮುಲಾಯಂ ಸಿಂಗ್ ಯಾದವ್ ನನ್ನು ಕೂಡ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಕೆಲವು ತಿಂಗಳ ಹಿಂದೆ ನೇಪಾಳದಲ್ಲಿ ಮದುವೆಯಾದ ದಂಪತಿ, ಬಿಹಾರದ ಬಿರ್‌ಗುಂಜ್ ತಲುಪಿದ್ದರು ಮತ್ತು ಅಲ್ಲಿಂದ ಪಾಟ್ನಾ ತಲುಪಿದರು. ಬಳಿಕ ಮುಲಾಯಂ ಸಿಂಗ್ ಹಾಗೂ ಇಕ್ರಾ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಇಬ್ಬರು ಜುನ್ನಸಂದ್ರ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು. ಅಲ್ಲಿ ಯಾದವ್ ಸೆಪ್ಟೆಂಬರ್ 2022 ರಿಂದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು’ ಎಂದು ತನಿಖೆಯಿಂದ ತಿಳಿದುಬಂದಿದೆ.
ಇಕ್ರಾ ಅವರ ಹೆಸರನ್ನು ರಾವ್ ಯಾದವ್ ಎಂದು ಬದಲಾಯಿಸಿ ಆಧಾರ್ ಕಾರ್ಡ್ ಪಡೆದಿದ್ದರು, ನಂತರ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇಕ್ರಾ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿರುವ ತಮ್ಮ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದ್ದರು. ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತದಳ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಶೇಷ ತಂಡ ರಚಿಸಿ ಖಚಿತ ಮಾಹಿತಿ ಮೇರೆಗೆ ಶುಕ್ರವಾರ (ಜ. 20) ದಾಳಿ ನಡೆಸಿ ಇಕ್ರಾ ಹಾಗೂ ಮುಲಾಯಂ ಸಿಂಗ್ ಅವರನ್ನು ಬಂಧಿಸಲಾಯಿತು.
ವಿಚಾರಣೆ ವೇಳೆ ಇಕ್ರಾ, ಪಾಕಿಸ್ತಾನ ನಿವಾಸಿ ಎಂಬುದು ತಿಳಿಯಿತು. ಬಳಿಕವೇ ಅವರನ್ನು ಬಂಧಿಸಲಾಯಿತು. ಪಾಕಿಸ್ತಾನದ ಯಾವುದೇ ಬೇಹುಗಾರಿಕೆಯ ಭಾಗವಾಗಿರುವ ಬಗ್ಗೆ ಪರಿಶೀಲಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.