ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಅಲ್ಪಕಾಲ ಬಿರುಗಾಳಿ ಸಹಿತ ಸುರಿದ ರಣಮಳೆ ಭಾರೀ ಅನಾಹುತಗಳನ್ನೇ ಸೃಷ್ಟಿಸಿತು. ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಅಲ್ಪಕಾಲ ಬಿರುಗಾಳಿ ಸಹಿತ ಸುರಿದ ರಣಮಳೆ ಭಾರೀ ಅನಾಹುತಗಳನ್ನೇ ಸೃಷ್ಟಿಸಿತು.
ಮಧ್ಯಾಹ್ನ 2.30 ರಿಂದ 5.30 ರವರೆಗೆ ಬೆಂಗಳೂರಿನಲ್ಲಿ 30 ಮಿಮೀ ಮಳೆ ದಾಖಲಾಗಿದೆ. ಈ ವೇಳೆ ಗುಡುಗು, ಮಿಂಚು, ಆಲಿಕಲ್ಲು ಮತ್ತು ಬಲವಾದ ಗಾಳಿ ಬೀಸಿತು.
ಮಳೆಯ ಪರಿಣಾಮ ಮಲ್ಲೇಶ್ವರಂ, ರಾಜಾಜಿನಗರ, ಶಿವಾಜಿನಗರ, ಮೇಕ್ರಿ ಸರ್ಕಲ್, ಹೆಬ್ಬಾಳ, ಯಶವಂತಪುರ, ಬಾಣಸವಾಡಿ, ಮಾಗಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಬೆಂಗಳೂರಿನ ಹಲವೆಡೆ ವಿಶೇಷವಾಗಿ ಉತ್ತರ ಮತ್ತು ಪಶ್ಚಿಮ ಬೆಂಗಳೂರಿನಲ್ಲಿ ಆಲಿಕಲ್ಲುಗಳ ಮಳೆಯಾಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ನಗರದ ಬಹುತೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಹಲವೆಡೆ ವಿದ್ಯುತ್ ಕಡಿತಗೊಂಡು ಸಮಸ್ಯೆಗಳು ಸೃಷ್ಟಿಗೊಂಡಿದ್ದವು.
ಬೆಂಗಳೂರು ನಗರದಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ಮಳೆ ದಾಖಲಾಗಿದ್ದರೆ, ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಸಂಜೆ 5.30 ರವರೆಗೆ 30 ಮಿಮೀ ಮಳೆ ದಾಖಲಾಗಿದ್ದರೆ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 25.1 ಮಿಮೀ ಮತ್ತು ಕೆಐಎ 8.6 ಮಿಮೀ ದಾಖಲಾಗಿದೆ.
ರಾತ್ರಿ 8.30ರವರೆಗೆ ನಗರದಲ್ಲಿ 31.4ಮಿ.ಮೀ ಹಾಗೂ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 26.5ಮಿ.ಮೀ ಮಳೆ ದಾಖಲಾಗಿದೆ.
ಮಧ್ಯಾಹ್ನ 3.30-4 ಗಂಟೆಯ ವರೆಗೆ ತೀವ್ರ ಮಳೆಯಾಗಿದ್ದು, ನಗರದ ಬಹುತೇಕ ಭಾಗಗಳಲ್ಲಿ 24 ಮಿಮೀ ಮಳೆ ದಾಖಲಾಗಿದೆ.
ಕಳೆದ ವರ್ಷ ಕೂಡ ಮೇ ತಿಂಗಳಿನಲ್ಲಿ ಇದೇ ರೀತಿಯ ಮಳೆಯಾಗಿತ್ತು. ಈ ವರ್ಷ ಕೂಡ ಅದೇ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಡಿಸಿಗಳು ಸೇರಿದಂತೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಈ ಸಂಬಂಧ ಮಾಹಿತಿ ನೀಡಲಾಗಿದೆ ಎಂದು ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ಐದು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಮೊದಲ ಮೂರು ದಿನಗಳಲ್ಲಿ ಭಾರೀ ಮಳೆ ಮತ್ತು ನಾಲ್ಕು ಮತ್ತು ಐದನೇ ದಿನದಲ್ಲಿ ಕ್ರಮೇಣ ಇಳಿಕೆಯಾಗಲಿದೆ ಎಂದು ತಿಳಿಸಿದೆ.