ಬೆಂಗಳೂರು:
ಚಂದನವನಕ್ಕೆ ಮಾದಕ ಜಾಲದ ನಂಟು ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರನೇ ಆರೋಪಿ ಆದಿತ್ಯಾ ಆಳ್ವ ಸಹೋದರಿ ಪ್ರಿಯಾಂಕ ಆಳ್ವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಇಮೇಲ್ ಕಳುಹಿಸಿ, ವಿಚಾರಣೆ ಎದುರಿಸಲು ಸಮಯಾವಕಾಶ ಕೋರಿದ್ದಾರೆ.
ನಗರದ ಚಾಮರಾಜಪೇಟೆ ಬಳಿಯ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸಿಸಿಬಿ ಅಧಿಕಾರಿಗಳು ಈಗಾಗಲೇ ಎರಡು ಬಾರಿ ಪ್ರಿಯಾಂಕ ಆಳ್ವಗೆ ನೋಟಿಸ್ ನೀಡಿದ್ದರು. ಎರಡು ಬಾರಿಯೂ ವಿಚಾರಣೆಗೆ ಗೈರಾಗಿದ್ದ ಪ್ರಿಯಾಂಕಾ ಅವರು ಇದೀಗ ಇಮೇಲ್ ವೊಂದನ್ನು ಸಿಸಿಬಿಗೆ ರವಾನಿಸಿದ್ದಾರೆ.
ಸದ್ಯ ನನಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ನನಗೆ ಎರಡು ಪುಟ್ಟ ಮಕ್ಕಳಿದ್ದಾರೆ. ಅವರನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದರೆ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರಬೇಕಾಗುತ್ತದೆ. ಬೆಂಗಳೂರಿನಲ್ಲಿ ಸದ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವುರಿಂದ ಮುಂಬೈನಿಂದ ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಹೀಗಾಗಿ ಸ್ವಲ್ಪ ದಿನದ ಬಳಿಕ ನಾನು ವಿಚಾರಣೆಗೆ ಹಾಜರಾಗಿ, ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುವೆ ಎಂದು ಪ್ರಿಯಾಂಕ ಇಮೇಲ್ ನಲ್ಲಿ ಸಿಸಿಬಿಗೆ ಸಮಜಾಯಿಷಿ ನೀಡಿದ್ದಾರೆ.
ಇ-ಮೇಲ್ ಸಂದೀಪ್ ಪಾಟೀಲ್ ಅವರಿಗೆ ಬಂದಿದ್ದರಿಂದ ಮುಂದಿನ ನಿರ್ಧಾರ ಕೈಗೊಳ್ಳಲು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಆಳ್ವಾ ಅವರ ಸಹೋದರ ಆದಿತ್ಯ ಆಳ್ವಾ ಡ್ರಗ್ಸ್ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ತಲೆಮರಿಸಿಕೊಂಡಿದ್ದಾರೆ.
ಪ್ರಿಯಾಂಕ ಮುಂಬೈಯಲ್ಲಿ ವಾಸವಾಗಿದ್ದರಿಂದ ಸಹೋದರಿ ಮನೆಯಲ್ಲಿ ಆದಿತ್ಯ ಆಶ್ರಯ ಪಡೆದಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಹಿಂದೆ ಸಿಸಿಬಿ ಪೊಲೀಸರು ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದರು.
ಪ್ರಿಯಾಂಕಾ, ಆದಿತ್ಯಗೆ ಆಶ್ರಯ ನೀಡಿದ ಆರೋಪದಡಿ ಸಿಸಿಬಿ ಪೊಲೀಸರು ಪ್ರಿಯಾಂಕಗೆ ನೋಟಿಸ್ ಜಾರಿಮಾಡಿದ್ದಾರೆ.