ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಬಾಲಕಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಬಾಲಕಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ನಗರದ ಕುರುಪೇಟೆ ನಿವಾಸಿ, ಸಾತನೂರು ರಸ್ತೆ ಹೆಂಚಿನ ಫ್ಯಾಕ್ಟರಿ ಮುಂಭಾಗ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸುಮಂತ್ ಅಲಿಯಾಸ್ ಅಪ್ಪು (22) ಬಂಧಿತ ಆರೋಪಿಯಾಗಿದ್ದಾನೆ.
ಆ್ಯಸಿಡ್ ದಾಳಿಯಿಂದ ಬಾಲಕಿ ಶೇ.40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾಳೆ. ಪಿಯುಸಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಬೆನ್ನು, ಎಡಗಣ್ಣು, ಭುಜದ ಮೇಲಿನ ಗಾಯಗಳಿಂದ ಬಳಲುತ್ತಿದ್ದು, ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆರೋಪಿ ನಗರದ ಹೊರವಲಯದ ಸಾತನೂರು ರಸ್ತೆಯಲ್ಲಿ ತೆರಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿ ಶುಕ್ರವಾರ ಬೆಳಿಗ್ಗೆ ಸಂತ್ರಸ್ತೆ ಮನೆಗೆ ಕಲ್ಲು ಎಸೆದಿದ್ದ. ತನ್ನಿಂದ ದೂರ ಇರಬೇಕು ಎಂದರೆ ಕನಿಷ್ಟ ಕಾಲಿಗೆ ಬಿದ್ದು ಬೇಡಿಕೊಳ್ಳುವಂತೆ ತಿಳಿಸಿದ್ದ. ಬಳಿಕ ಬಾಲಕಿ ತನ್ನ ಸಹೋದರನೊಂದಿಗೆ ನಾರಾಯಣಪ್ಪ ಕೆರೆ ಬಳಿ ಇರುವ ಬೈಪಾಸ್ ರಸ್ತೆಗೆ ತೆರಳಿ ಆರೋಪಿ ಕಾಲಿಗೆ ಬಿದ್ದಿದ್ದಾಳೆ. ಈ ವೇಳೆ ಆರೋಪಿ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಸಹೋದರ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ. ಸುಮಂತ್ ಬಾಲಕಿ ಹಿಂದೆ ಬಿದ್ದಿರುವುದು ಎರಡೂ ಕುಟುಂಬಕ್ಕೆ ತಿಳಿದಿತ್ತು. ಆದರೆ, ಜಾತಿಗಳು ಬೇರೆಯಾಗಿದ್ದರಿಂದ ಮೌನ ತಾಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ನಡುವೆ ಬಾಲಕಿಯ ಆರೋಗ್ಯ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಅಧೀಕ್ಷಕಿ ಮತ್ತು ನಿರ್ದೇಶಕಿ (ನೇತ್ರಶಾಸ್ತ್ರ) ಡಾ.ಬಿ.ಎಲ್.ಸುಜಾತಾ ರಾಥೋಡ್ ಅವರು, ಹೊರರೋಗಿಗಳ ವಿಭಾಗದಲ್ಲಿ ಬಾಲಕಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಆಕೆ ಭಾಗಶಃ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರು ಶನಿವಾರ ಬೆಳಗ್ಗೆ ಆಸ್ಪತ್ರೆ ಭೇಟಿ ನೀಡಿದ್ದು, ಬಾಲಕಿಯ ಆರೋಗ್ಯ ವಿಚಾರಿಸಿದರು. ಈ ವೇಳೆ ಚಿಕಿತ್ಸೆ ಅಗತ್ಯವಿರುವ ನೆರವನ್ನುನೀಡುವುದಾಗಿ ಭರವಸೆ ನೀಡಿದರು.
ಆಸಿಡ್‌ನಲ್ಲಿನ ರಾಸಾಯನಿಕ ಅಂಶಗಳ ಬಗ್ಗೆ ಖಚಿತಪಡಿಸಿಕೊಳ್ಳಲು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಗಾಗಿ ಕಾಯುತ್ತಿದ್ದಾರೆ.
ಏತನ್ಮಧ್ಯೆ, ಆರೋಪಿ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಕಂಡಿರುವ ಕನಕಪುರ ನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.