ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಸಂಪಾದಿಸಿರುವ ಪ್ರಕರಣದಲ್ಲಿ ಸರಕಾರಿ ಅಧಿಕಾರಿಯೊಬ್ಬರನ್ನು ಅಪರಾಧಿ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಪರಿಗಣಿಸಿ, 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಕೋಟಿ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.
ಸಿ.ರಾಮಲಿಂಗಯ್ಯ ಎಂಬುವರು ಪ್ರಕರಣದ ಅಪರಾಧಿಯಾಗಿದ್ದು, ಇವರು 2011ರಲ್ಲಿ ಬೆಂಗಳೂರು ವಿದ್ಯುತ್ ಕಂಪೆನಿ (ಬೆಸ್ಕಾಂ) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದರು. ಆಗ ಲೋಕಾಯುಕ್ತ poಲೀಸರು ಇವರ ಮನೆ ಮೇಲೆ ದಾಳಿ ಮಾಡಿದ್ದರು. ಅಪಾರ ಪ್ರಮಾಣದ ಅಸ್ತಿ ಪತ್ತೆಯಾಗಿತ್ತು. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು.
ತನಿಖೆಯಲ್ಲಿ ಆದಾಯಕ್ಕಿಂತ 1.03 ಕೋಟಿ ಅಂದರೆ ಶೇ.44.6ರಷ್ಟು ಅಕ್ರಮ ಆಸ್ತಿ ಹೊಂದಿರುವುದು ದೃಢಪಟ್ಟಿತ್ತು. ಆಗಿನ ಡಿವೈಎಸ್‍ಪಿಗಳಾಗಿದ್ದ ಅಬ್ದುಲ್ ಅಹದ್, ಡಾ.ಅಶ್ವಿನಿ ಹಾಗೂ ಎಂ.ನಾರಾಯಣ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ತೀರ್ಪು ನೀಡಿದ್ದು, ಅಪರಾಧಿ 1 ಕೋಟಿ ರೂ. ದಂಡ ಪಾವತಿಸಲು ಸಾಧ್ಯವಾಗದಿದ್ದಲ್ಲಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರ ಅಭಿಯೋಜಕರಾದ ರಮೇಶ್ ಬಾಬು ಹಾಗೂ ಮಂಜುನಾಥ್ ಹೊನ್ನಯ್ಯ ನಾಯಕ್ ವಾದ ಮಂಡಿಸಿದ್ದರು.