Home ಕರ್ನಾಟಕ ಬೆಂಗಳೂರು | ಆರು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಸಂದೇಶ : ಇದೊಂದು ಹುಸಿ ಕರೆ ಎಂದ...

ಬೆಂಗಳೂರು | ಆರು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಸಂದೇಶ : ಇದೊಂದು ಹುಸಿ ಕರೆ ಎಂದ ಪೊಲೀಸರು

29
0

ಬೆಂಗಳೂರು : ನಗರದ ಆರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದುಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ನಗರ ಪೊಲೀಸ್ ಇಲಾಖೆಯ ವಿಶೇಷ ಘಟಕದ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿದ್ದು, ಕೂಡಲೇ ಪೊಲೀಸರು ಶ್ವಾನ ಮತ್ತು ಬಾಂಬ್ ನಿಷ್ಕ್ರಿಯ ತಂಡಗಳೊಂದಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳಾಗಲಿ, ಬಾಂಬ್ ಆಗಲಿ ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೇ 12ರ ರವಿವಾರ ರಾತ್ರಿ 8 ಗಂಟೆ ಸುಮಾರಿಗೆ ನಗರ ಪೊಲೀಸ್ ಇಲಾಖೆಯ ವಿಶೇಷ ಘಟಕದ ಇ-ಮೇಲ್ ಖಾತೆಗೆ ಬೆದರಿಕೆ ಸಂದೇಶ ಬಂದಿದ್ದು, ‘ನಗರದ ಸೈಂಟ್ ಫಿಲೋಮಿನಾ, ಸೈಂಟ್ ಮಾರ್ಥಾಸ್, ಜೆಎಂಜೆ ಆಸ್ಪತ್ರೆ ಸೇರಿದಂತೆ ಆರು ಆಸ್ಪತ್ರೆಗಳಲ್ಲಿ ಈಗಾಗಲೇ ಇಡಲಾಗಿರುವ ಬಾಂಬ್ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ. ಇದು ಕೇವಲ ಹೆದರಿಕೆಯಲ್ಲ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ನಿಮಗೆ ಕೆಲವು ಗಂಟೆಗಳ ಕಾಲಾವಕಾಶವಿದೆ, ಅಷ್ಟರಲ್ಲಿ ನಿಷ್ಕ್ರಿಯಗೊಳಿಸಿ ಇಲ್ಲದಿದ್ದರೆ ಕಟ್ಟಡದೊಳಗಿನ ಅಮಾಯಕರ ರಕ್ತವು ನಿಮ್ಮ ಕೈಯಲ್ಲಿರುತ್ತದೆ’ ಎಂಬುದಾಗಿ ಇ-ಮೇಲ್ ಬಂದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ನಗರ ಪೊಲೀಸ್ ಘಟಕದ ವಿಶೇಷ ಘಟಕ (ಎಸ್‍ಬಿ)ದ ಇ-ಮೇಲ್ ವಿಳಾಸಕ್ಕೆ ನಗರದ ಕೆಲ ಆಸ್ಪತ್ರೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ಬಂದಿತ್ತು. ಕೂಡಲೇ ಎಲ್ಲ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಇದೊಂದು ಹುಸಿ ಬಾಂಬ್ ಸಂದೇಶ ಎಂಬುದು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here