ಬೆಂಗಳೂರು;- ರಾಜಧಾನಿ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಅಲ್ಲದೆ, ಈದ್ಗಾ ಮೈದಾನ ಬಳಕೆ ಮಾಡಲು ಒಂದು ವೇಳೆ ಕಾನೂನು ಅಡಚಣೆಗಳು ಉಂಟಾದಲ್ಲಿ ಅರ್ಜಿದಾರರ ಒಕ್ಕೂಟದಿಂದ ರಾಜ್ಯೋತ್ಸವ ಆಚರಣೆ ಮಾಡಲು ಜಿಲ್ಲಾಡಳಿತದಿಂದ ಪರ್ಯಾಯ ಮೈದಾನ ಒದಗಿಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟ ನಿರ್ದೇನ ನೀಡಿದೆ.
ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ಅವಕಾಶ ನಿರಾಕರಿಸಿ ಜಿಲ್ಲಾಧಿಕಾರಿ ನೀಡಿದ್ದ ಹಿಂಬರಹ ಪ್ರಶ್ನಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ನಡೆಸಿತು.
ಕರ್ನಾಟಕ ರಾಜ್ಯ ರಚನೆ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ಇಡೀ ರಾಜ್ಯದ ಜನತೆ ಆಚರಣೆ ಮಾಡಬೇಕಾಗಿದ್ದು, ಎಲ್ಲ ಧರ್ಮದವರೂ ಸೇರಿ ಮೂರು ದಿನಗಳ ಕಾಲ ಆಚರಣೆ ಮಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಲಾಗುವುದು. ರಾಜ್ಯ ಬಾವುಟವನ್ನು ಮಾತ್ರ ಧ್ವಜಾರೋಹಣ ಮಾಡಿ, ಇತರೆ ಯಾವುದೇ ಬಾವುಟ ಅಳವಡಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ನೀಡಿದ ಮುಚ್ಚಳಿಕೆ ದಾಖಲಿಸಿಕೊಂಡಿತು. ಬಳಿಕ ಷರತ್ತುಬದ್ದ ಅನುಮತಿ ನೀಡಿ, ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ.
The post ಬೆಂಗಳೂರು: ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್ appeared first on Ain Live News.