ಬೆಂಗಳೂರು:
ಉದ್ಯಮಿಯನ್ನು ಅಪಹರಿಸಿ, ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ಸೇರಿದಂತೆ ಇಬ್ಬರು ಆರೋಪಿಗಳನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸಚಿನ್ ಹಾಗೂ ಗೌರಿಶಂಕರ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಜ. 5ರಂದು ರಾಜಾಜಿನಗರದ ಡಾ.ರಾಜ್‍ಕುಮಾರ್ ರಸ್ತೆಯಿಂದ ಉದ್ಯಮಿ ಚೇತನ್ ಶಾ ಎಂಬುವರನ್ನು ಅಪಹರಿಸಿದ್ದ ಆರೋಪಿಗಳು, 7ಲಕ್ಷ ರೂ. ವಸೂಲಿ ಮಾಡಿದ್ದರು. ಬಳಿಕ ತಾನೇ ಹಣ ಕೊಡುತ್ತಿರುವುದಾಗಿ ಚೇತನ್ ಶಾರಿಂದ ಸ್ವಯಂ ಹೇಳಿಕೆ ಕೊಡಿಸಿ, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಿಟ್ಟು ಪರಾರಿಯಾಗಿದ್ದರು.
ಘಟನೆಯ ವಿವರ: ಚೇತನ್ ಶಾ ಅವರು 2023ನೆ ಸಾಲಿನಲ್ಲಿ ತಮ್ಮ ಮಗಳಿಗೆ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಬಿಬಿಎ ಸೀಟಿಗಾಗಿ ಪ್ರಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಚೇತನ್ ಶಾ ಅವರ ಮಗಳ ಸ್ನೇಹಿತನೊಬ್ಬನ ಮೂಲಕ ಆರೋಪಿ ಸಚಿನ್ ಪರಿಚಯವಾಗಿತ್ತು. ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸಚಿನ್, ತನಗೆ ಸೆಂಟ್ ಜೋಸೆಫ್ ವಿವಿಯಲ್ಲಿ ಪರಿಚಯದವರಿದ್ದಾರೆ, ತಾನೇ ಸೀಟು ಕೊಡಿಸುತ್ತೇನೆ ಎಂದಿದ್ದ ಎನ್ನಲಾಗಿದೆ.
ಇದಕ್ಕೆ ಪ್ರತಿಯಾಗಿ 4 ಲಕ್ಷ ರೂ. ಹಣ ಕೇಳಿದ್ದಾನೆ. ಆದರೆ ಸೀಟು ಕೊಡಿಸದೇ ವಿಳಂಬ ಮಾಡಿದ್ದರಿಂದ ಬೇರೊಬ್ಬರ ಸಹಾಯದ ಮೂಲಕ ಚೇತನ್ ಶಾ ತಮ್ಮ ಮಗಳಿಗೆ ಸೀಟು ಕೊಡಿಸಿದ್ದರು.
2023ರ ಮೇ ತಿಂಗಳಿನಲ್ಲಿ ಚೇತನ್ ಶಾರನ್ನು ಭೇಟಿಯಾಗಿದ್ದ ಸಚಿನ್, ನಿಮ್ಮ ಮಗಳಿಗೆ ಸೀಟು ಕೊಡಿಸಿದ್ದು ನಾನೇ, ನನಗೆ 4 ಲಕ್ಷ ರೂ. ಕೊಡಬೇಕು ಎಂದು ಒತ್ತಾಯಿಸಿದ್ದಾನೆ. ಆದರೆ ಹಣ ಕೊಡಲು ಚೇತನ್ ಶಾ ಒಪ್ಪಿರಲಿಲ್ಲ. ಆ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದ ಸಚಿನ್, ನಂತರದಲ್ಲೂ ಸಹ ಬೇರೆ ಬೇರೆ ವ್ಯಕ್ತಿಗಳಿಂದ ಬೆದರಿಕೆ ಕರೆ ಮಾಡಿಸಿದ್ದಾನೆ. ಜ. 5ರಂದು ಪೀಣ್ಯದಲ್ಲಿರುವ ತಮ್ಮ ಇಂಡಸ್ಟ್ರಿಯಿಂದ ಮನೆಗೆ ತೆರಳುತ್ತಿದ್ದಾಗ ರಾಜಾಜಿನಗರ ರಸ್ತೆಯ ಸಿಗ್ನಲ್ ಬಳಿ ಆಟೋದಲ್ಲಿ ಬಂದು ಚೇತನ್ ಶಾರ ಕಾರು ಅಡ್ಡಗಟ್ಟಿದ್ದ ಸಚಿನ್ ಮತ್ತು ಆತನ ಸ್ನೇಹಿತರು, ಅವರದ್ದೇ ಕಾರಿನಲ್ಲಿ ಅಪಹರಿಸಿ ಕಾರ್ಡ್ ರಸ್ತೆಯಲ್ಲೆಲ್ಲ ಸುತ್ತಾಡಿಸಿದ್ದರು. ಸೀಟು ಕೊಡಿಸಿದ್ದಕ್ಕಾಗಿ 4 ಲಕ್ಷ ರೂ, ಬಡ್ಡಿ 2 ಲಕ್ಷ ರೂ. ಹಾಗೂ ತನ್ನ ಹುಡುಗರಿಗೆ 1 ಲಕ್ಷ ರೂ., ಒಟ್ಟು 7 ಲಕ್ಷ ರೂ. ಕೊಡುವಂತೆ ಸಚಿನ್ ಬೆದರಿಕೆ ಹಾಕಿದ್ದ. ಈ ವೇಳೆ ಚೇತನ್ ಮನೆಗೆ ಓರ್ವ ಆರೋಪಿಯನ್ನು ಕಳುಹಿಸಿ, ಆತನ ಹೆಂಡತಿಯ ಬಳಿಯಿಂದ 7 ಲಕ್ಷ ರೂ. ಹಣ ಪಡೆದಿದ್ದ. ಬಳಿಕ ಆರೋಪಿಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾರನ್ನು ಬಿಟ್ಟು ಕಳುಹಿಸಿದ್ದರು. ಇದಾದ ಬಳಿಕ ಚೇತನ್ ಶಾ ರಾಜಾಜಿನಗರ ಠಾಣೆಗೆ ದೂರು ನೀಡಿದ್ದರು.
ರಾಜಾಜಿನಗರ ಠಾಣಾ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಸಚಿನ್ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಬಂಧಿತರಿಂದ 7 ಲಕ್ಷ ರೂ. ನಗದು, ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.