ಬೆಂಗಳೂರು : ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ಮಹಿಳಾ ವರದಿಗಾರ್ತಿಯನ್ನು ಸುದ್ದಿ ಸಂಸ್ಥೆ ANI ಗಾಗಿ ವರದಿಗಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಗುರುವಾರ ವರದಿಯಾಗಿದೆ. ಪಿಟಿಐನ ಅಧಿಕೃತ ಎಕ್ಸ್ ಹ್ಯಾಂಡಲ್ನಿಂದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ವೀಡಿಯೊದಲ್ಲಿ ಮಹಿಳಾ ವರದಿಗಾರ್ತಿ ಎಲಿಜಬೆತ್ ಮತ್ತು ಎಎನ್ಐ ವರದಿಗಾರ ರಾಘವೇಂದ್ರ ತೀವ್ರ ವಾಗ್ವಾದದಲ್ಲಿ ತೊಡಗಿರುವುದು ಕಾಣಿಸುತ್ತಿದೆ. ನಂತರ ರಾಘವೇಂದ್ರ ಅವರು ಮಹಿಳಾ ವರದಿಗಾರ್ತಿಗೆ ಕಪಾಳಮೋಕ್ಷ ಮಾಡುತ್ತಾರೆ. ಸುತ್ತಮುತ್ತಲಿದ್ದ ಜನರು ಬಲವಂತವಾಗಿ ಹಿಂದಕ್ಕೆ ತಳ್ಳಿದ ನಂತರವೇ ANI ವರದಿಗಾರ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಗುರುವಾರ ಬೆಂಗಳೂರಿನಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪತ್ರಿಕಾಗೋಷ್ಠಿಯ ವೇಳೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಿಟಿಐ, ““ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ (@DKShivakumar @DKSureshINC) ಯುವ ಪಿಟಿಐ ವರದಿಗಾರ್ತಿಯೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಎನ್ಐ (@ANI) ವರದಿಗಾರನ ಅಸಹ್ಯಕರ ವರ್ತನೆ. ANI (@smitaprakash) ತನ್ನ ಸಿಬ್ಬಂದಿಯ ಇಂತಹ ವರ್ತನೆಯನ್ನು ಕ್ಷಮಿಸುತ್ತದೆಯೇ? ”ಎಂದು PTI ಹೇಳಿಕೆಯಲ್ಲಿ ತಿಳಿಸಿದೆ.
“ಪಿಟಿಐ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳು ಆಕ್ರೋಶಗೊಂಡಿದ್ದಾರೆ. ಈ ಅಪ್ರಚೋದಿತ ಹಿಂಸಾಚಾರವನ್ನು ಸಂಸ್ಥೆಯು ತೀವ್ರವಾಗಿ ಖಂಡಿಸುತ್ತದೆ. ಪಿಟಿಐ ತನ್ನ ಉದ್ಯೋಗಿಗಳನ್ನು ರಕ್ಷಿಸಲು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತದೆ. ಈ ಘಟನೆಯು ವರದಿಗಾರ್ತಿಗೆ ಆಘಾತವನ್ನುಂಟು ಮಾಡಿದೆ. ಆಘಾತಕಾರಿ ಘಟನೆಯ ಕುರಿತು ಎಫ್ಐಆರ್ ದಾಖಲಿಸಲಾಗುತ್ತಿದೆ. ಪಿಟಿಐ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಲಿದೆ” ಎಂದು ಪಿಟಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೌಜನ್ಯ : thenewsminute.com