ಬೆಂಗಳೂರು: ಟಾಟಾ ಮೋಟಾರ್ಸ್ ಲಿಮಿಟೆಡ್ ಬಿಎಂಟಿಸಿಗೆ ನೀಡಿರುವ ಮೊದಲ ಎಲೆಕ್ಟ್ರಿಕ್ ಪ್ರೋಟೋಟೈಪ್ ಬಸ್’ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಶುಕ್ರವಾರ ಚಾಲನೆ ನೀಡಿದರು.
ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಮುಂಭಾಗ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಸ್’ಗೆ ಸಚಿವರು ಲಾಚನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಿಎಂಟಿಸಿಯ ನೂತನ ವಿದ್ಯುತ್ ವಾಹನಗಳಲ್ಲಿ ಮಾಲಿನ್ಯ ರಹಿತವಾಗಿ ಬೆಂಗಳೂರಿನ ಜನರು ಪ್ರಯಾಣಿಸಬಹುದು. ಸರ್ಕಾರ ಸಾರಿಗೆ ಸಂಸ್ಥೆಗಳಿಗೆ 4,000 ಹೊಸ ವಾಹನಗಳನ್ನು ಒದಗಿಸುವ ಮತ್ತು 13,000 ಸಿಬ್ಬಂದಿ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್‌ನಲ್ಲಿ ರೂ.500 ಕೋಟಿ ನಿಗಮಗಳಿಗೆ ಬಸ್ ಖರೀದಿಗಾಗಿ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳಿಗೆ ನೂತನ ವಾಹನಗಳನ್ನು ಒದಗಿಸಲಾಗಿದ್ದು, ಇದರಿಂದ ಅವರು ಬಸ್ ನಿಲ್ದಾಣಗಳು, ಮೋಟಾರು ವಾಹನ ಇಲಾಖೆ, ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು. ಈ ನೂತನ 921 ಎಲೆಕ್ಟ್ರಿಕ್ ಬಸ್‌ಗಳನ್ನು ಆರ್ಥಿಕ ವರ್ಷದೊಳಗಾಗಿ ಹಂತ-ಹಂತವಾಗಿ ಸೇರ್ಪಡೆ ಮಾಡುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.