ಹೈಗ್ರೌಂಡ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿದ್ದ ಬಸ್ ಶೆಲ್ಟರ್ ಕಳವು ಪ್ರಕರಣ ಬಗೆಹರಿದಿದೆ. ಇದು ಅವೈಜ್ಞಾನಿಕವಾಗಿದ್ದು, ಪಾದಚಾರಿಗಳ ಜೀವಕ್ಕೆ ಅಪಾಯ ತರುತ್ತಿದೆ ಎಂಬ ಸಾರ್ವಜನಿಕರಿಂದ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬಸ್ ತಂಗುದಾಣವನ್ನು ಕೆಡವಿ ಗೋದಾಮಿಗೆ ಸ್ಥಳಾಂತರಿಸಿದ್ದಾರೆ. ಬೆಂಗಳೂರು: ಹೈಗ್ರೌಂಡ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿದ್ದ ಬಸ್ ಶೆಲ್ಟರ್ ಕಳವು ಪ್ರಕರಣ ಬಗೆಹರಿದಿದೆ. ಇದು ಅವೈಜ್ಞಾನಿಕವಾಗಿದ್ದು, ಪಾದಚಾರಿಗಳ ಜೀವಕ್ಕೆ ಅಪಾಯ ತರುತ್ತಿದೆ ಎಂಬ ಸಾರ್ವಜನಿಕರಿಂದ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬಸ್ ತಂಗುದಾಣವನ್ನು ಕೆಡವಿ ಗೋದಾಮಿಗೆ ಸ್ಥಳಾಂತರಿಸಿದ್ದಾರೆ.
ಏನಿದು ಪ್ರಕರಣ: ಅಂದಹಾಗೆ, ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಬಳಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಸ್ಟೇನ್‌ಲೆಸ್ ಸ್ಟೀಲ್ ಬಸ್ ಶೆಲ್ಟರ್ ನಾಪತ್ತೆಯಾಗಿದೆ ಎಂದು Sign Post ಇಂಡಿಯಾ ಕಂಪನಿಯ ಎಂದು ಕಂಪನಿಯ ಉಪಾಧ್ಯಕ್ಷ ಎನ್ ರವಿರೆಡ್ಡಿ ಸೆಪ್ಟೆಂಬರ್ 30 ರಂದು ಪೊಲೀಸ್ ದೂರು ದಾಖಲಿಸಿದ್ದರು.
ಆಗಸ್ಟ್ 21 ರಂದು ಬಸ್ ಶೆಲ್ಟರ್ ನಿರ್ಮಿಸಲಾಗಿದ್ದು, ಆಗಸ್ಟ್ 28 ರಂದು ಭೇಟಿ ನೀಡಿದಾಗ ಅದು ಕಾಣೆಯಾಗಿದೆ. ಬಸ್ ತಂಗುದಾಣವನ್ನು ತೆಗೆದುಹಾಕಿದ್ದೀರಾ ಎಂದು ಬಿಬಿಎಂಪಿಯನ್ನು ಕೇಳಲಾಗಿದ್ದು, ಅವರ ನಿರ್ದೇಶನದ ಆಧಾರದ ಮೇಲೆ ಸೆಪ್ಟೆಂಬರ್ 30 ರಂದು ದೂರು ದಾಖಲಿಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದರು. ಬಸ್ ನಿಲ್ದಾಣ ತೆರವುಗೊಳಿಸಿದ ಸುಮಾರು ಒಂದು ತಿಂಗಳ ನಂತರ ದೂರು ದಾಖಲಾಗಿತ್ತು. ಕಂಪನಿಯು ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲು ಬಿಬಿಎಂಪಿಯಿಂದ ಟೆಂಡರ್ ಪಡೆದಿತ್ತು.
ತನಿಖೆ ವೇಳೆ ಸತ್ಯಾಂಶ ಬಯಲು: ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಿಬಿಎಂಪಿ ಸಿಬ್ಬಂದಿ ಬಸ್ ನಿಲ್ದಾಣ ತೆರವುಗೊಳಿಸುತ್ತಿರುವುದು ಕಂಡುಬಂದಿದ್ದು, ಅವರನ್ನು ಸಂಪರ್ಕಿಸಿದಾಗ ಸತ್ಯಾಂಶ ಹೊರಬಂದಿದೆ. ಅದು ಕಳ್ಳತನದ ಪ್ರಕರಣವಲ್ಲಾ, ಗುಣಮಟ್ಟವಿಲ್ಲದ ಕಾಮಗಾರಿಯಿಂದಾಗಿ ಬಿಬಿಎಂಪಿ ಅದನ್ನು ತೆಗೆದಿತ್ತು. ಕಂಪನಿಯ ಉಪಾಧ್ಯಕ್ಷರು ನಮಗೆ ತಪ್ಪುದಾರಿಗೆಳೆಯುವ ದೂರನ್ನು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ವಸಂತನಗರ ಉಪವಿಭಾಗದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಅವರನ್ನು ಸಂಪರ್ಕಿಸಿದ್ದು, ಕಳಪೆ ಕಾಮಗಾರಿಯ ವಿವರಣೆ ಕೋರಿ ಕಂಪನಿಗೆ ನೋಟಿಸ್ ನೀಡಲಾಗಿದೆ ಎಂದು ಎಇಇ ತಿಳಿಸಿದರು. ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಸ್ ತಂಗುದಾಣ ತೆಗೆಯಲಾಯಿತು. ಅದು ಕಳ್ಳತನವೂ ಅಲ್ಲ, ನಷ್ಟವೂ ಅಲ್ಲ. ಸರಿಯಾದ ಕೆಲಸ ಮಾಡಿಲ್ಲ ಮತ್ತು ಸಾರ್ವಜನಿಕರಿಗೆ ಅಪಾಯಕಾರಿ ಎಂದು ಭಾವಿಸಿದ ಬಿಬಿಎಂಪಿ ಅಧಿಕಾರಿಗಳು ಸ್ವತಃ ಬಸ್ ತಂಗುದಾಣವನ್ನು ತೆಗೆದುಹಾಕಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಮಾಧ್ಯಮಗಳಿಗೆ ತಿಳಿಸಿದರು.
ಬಸ್ ಶೆಲ್ಟರ್ ತೆರವುಗೊಳಿಸುವ ಮುನ್ನ ಬಿಬಿಎಂಪಿ ಅಧಿಕಾರಿಗಳು ಕಳಪೆ ಗುಣಮಟ್ಟದ ಕಾಮಗಾರಿ ಬಗ್ಗೆ ವಿವರಣೆ ಕೋರಿ ಬಸ್ ತಂಗುದಾಣ ನಿರ್ಮಾಣ ಮಾಡುತ್ತಿದ್ದ Sign post ಇಂಡಿಯಾ ಏಜೆನ್ಸಿಯ ಪ್ರತಿನಿಧಿ ರವಿರೆಡ್ಡಿ ಎಂಬುವರಿಗೆ ಬಿಬಿಎಂಪಿ ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿ, ಬಸ್ ಶೆಲ್ಟರ್ ನಿರ್ಮಿಸಲು ಪಾಲಿಕೆಯಿಂದ ಪಡೆದಿರುವ ಕಾರ್ಯಾದೇಶ ಪ್ರತಿಯನ್ನು ಕಚೇರಿಗೆ ಸಲ್ಲಿಸುವಂತೆ ಹಾಗೂ ಕಾಮಗಾರಿಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಆದರೆ, ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಕಾಮಗಾರಿಯನ್ನು ಅಪೂರ್ಣಗೊಳಿಸಿ ಸಂಬಂಧಪಟ್ಟ ಕಾರ್ಯಾದೇಶ ಪತ್ರದ ದಾಖಲೆಗಳನ್ನು ಸಹ ಕಚೇರಿಗೆ ಸಲ್ಲಿಸದೇ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಂದ ಆಗಸ್ಟ್ 25 ರಂದು ಅಸಮರ್ಪಕವಾಗಿ ನಿರ್ಮಾಣ ಮಾಡಿದ್ದ ಹಾಗೂ ಅಪೂರ್ಣಗೊಂಡಿರುವ ಬಸ್ ಶೆಲ್ಟರ್ ನ ತೆರವುಗೊಳಿಸಿದ್ದು, ವಾರ್ಡ್ ಕಚೇರಿಯ ಗೋದಾಮಿನಲ್ಲಿ ಇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.