Home ಕರ್ನಾಟಕ ಬೆಂಗಳೂರು | ಕಾಲೇಜು ಶುಲ್ಕದ ಹಣ ಆನ್‍ಲೈನ್ ಗೇಮ್‍ನಲ್ಲಿ ಕಳೆದುಕೊಂಡ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು | ಕಾಲೇಜು ಶುಲ್ಕದ ಹಣ ಆನ್‍ಲೈನ್ ಗೇಮ್‍ನಲ್ಲಿ ಕಳೆದುಕೊಂಡ ವಿದ್ಯಾರ್ಥಿನಿ ಆತ್ಮಹತ್ಯೆ

48
0

ಬೆಂಗಳೂರು: ಕಾಲೇಜು ಶುಲ್ಕವನ್ನು ಆನ್‍ಲೈನ್ ಗೇಮ್‍ನಲ್ಲಿ ಕಳೆದಿದ್ದ ವಿದ್ಯಾರ್ಥಿನಿಯೊಬ್ಬಳು ಹಣ ಹೊಂದಿಸಲಾಗದೇ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ವಿ.ವಿ.ಹಾಸ್ಟೆಲ್‍ನಲ್ಲಿ ವರದಿಯಾಗಿದೆ.

ಕೋಲಾರದ ಶ್ರೀನಿವಾಸಪುರ ಮೂಲದ ಪಾವನ(19) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಪಾವನ ಮೊದಲ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಮೂರು ದಿನ ರಜೆ ಇದ್ದಿದ್ದರಿಂದ ಹಾಸ್ಟೆಲ್‍ನಲ್ಲಿ ಸಹಪಾಠಿಗಳು ತಮ್ಮ ಊರುಗಳಿಗೆ ತೆರಳಿದ್ದರು. ಜೂ.16ರ ರವಿವಾರ ರಾತ್ರಿ ಒಬ್ಬಳೇ ಇದ್ದ ಪಾವನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಆಕೆ ಬಳಸಿದ್ದ ಚೇರ್ ಕೆಳಗಡೆ ಬಿದ್ದು ಜೋರಾದ ಶಬ್ದವಾಗಿದ್ದರಿಂದ ಪಕ್ಕದ ರೂಮ್‍ನ ಸಹಪಾಠಿಗಳು ಬಂದು ಗಮನಿಸಿದಾಗ ಪಾವನ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಹಾಸ್ಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮೃತದೇಹದ ಬಳಿ ಪತ್ತೆಯಾದ ಡೆತ್‍ನೋಟ್‍ನಲ್ಲಿ ‘ಆನ್‍ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ’ ಪಾವನ ಉಲ್ಲೇಖಿಸಿದ್ದಾರೆ. ತನಿಖೆ ವೇಳೆ ಪಾವನ ಆನ್‍ಲೈನ್ ಗೇಮ್‍ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೊಳಗಾಗಿರುವುದು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಲೇಜು ಶುಲ್ಕಕ್ಕಾಗಿ ಪೋಷಕರು ನೀಡಿದ್ದ ಹಣದಲ್ಲಿ ಆನ್‍ಲೈನ್ ಗೇಮ್‍ನಲ್ಲಿ 15 ಸಾವಿರ ರೂ. ಕಳೆದುಕೊಂಡಿದ್ದ ಪಾವನ, ಸ್ನೇಹಿತರ ಬಳಿ 10 ಸಾವಿರ ರೂ. ಹೊಂದಿಸಿದ್ದಳು ಎನ್ನಲಾಗಿದೆ. ಆದರೆ, ಉಳಿದ 5 ಸಾವಿರ ರೂ. ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸತ್ತು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here