Home ಕರ್ನಾಟಕ ಬೆಂಗಳೂರು | ಗೃಹ ಸಚಿವರ ಆಪ್ತನೆಂದು ನಂಬಿಸಿ ವಂಚನೆ : ಆರೋಪಿಯ ಬಂಧನ

ಬೆಂಗಳೂರು | ಗೃಹ ಸಚಿವರ ಆಪ್ತನೆಂದು ನಂಬಿಸಿ ವಂಚನೆ : ಆರೋಪಿಯ ಬಂಧನ

41
0

ಬೆಂಗಳೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಆಪ್ತನೆಂದು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಇಲ್ಲಿನ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬ್ಯಾಂಕ್‍ನಿಂದ ಸಾಲ, ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮುಹಮ್ಮದ್ ಝುಬೈರ್(30) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರಟಗೆರೆ ಬ್ಲಾಕ್ ಕಾಂಗ್ರೆಸ್‍ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿದ್ದ ಮುಹಮ್ಮದ್ ಝುಬೈರ್, ಗೃಹ ಸಚಿವ ಜಿ.ಪರಮೇಶ್ವರ್ ಅವರ ಆಪ್ತನೆಂದು ಹೇಳಿಕೊಂಡು, ಸಾರ್ವಜನಿಕರನ್ನು ನಂಬಿಸುತ್ತಿದ್ದ. ಬಳಿಕ ಅವರಿಗೆ ಬ್ಯಾಂಕ್‍ನಲ್ಲಿ ಸಾಲ, ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ ಎನ್ನಲಾಗಿದೆ.

ಇದೇ ರೀತಿ ಕೆಂಗೇರಿಯ ಶಾಹಿದಾ ತಬಸ್ಸುಮ್(55) ಎಂಬುವರಿಂದ 1.20 ಕೋಟಿ ರೂ. ಹಣ ಹಾಗೂ 186 ಗ್ರಾಂ. ಚಿನ್ನ ಪಡೆದು ವಂಚಿಸಿದ್ದ. ಈ ಬಗ್ಗೆ ಶಾಹಿದಾ ತಬಸ್ಸುಮ್ ನೀಡಿದ ದೂರಿನನ್ವಯ ಮಾರ್ಚ್‍ನಲ್ಲಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಯು ಕೆಂಗೇರಿ ಠಾಣೆ ಸೇರಿದಂತೆ ಬೆಂಗಳೂರು ಹಾಗೂ ತುಮಕೂರಿನ ವಿವಿಧೆಡೆ ಸಾಕಷ್ಟು ಜನರಿಗೆ ವಂಚಿಸಿದ್ದು, ಆತನ ವಿರುದ್ಧ ಸುಮಾರು 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಕೆಲವೆಡೆ ದಾಖಲೆಗಳಿಗೆ ರಾಜ್ಯಪಾಲರ ಸಹಿ, ವಿವಿಧ ಇಲಾಖೆ ಅಧಿಕಾರಿಗಳ ನಕಲಿ ಮೊಹರು ಬಳಸಿ ವಂಚಿಸಿರುವುದು, ಕೆಲ ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here