ಹಲ್ಲೆ ನಡೆಸಲು ಯತ್ನಿಸಿದ ದರೋಡೆಕೋರನ ಕಾಲಿಗೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರು: ಹಲ್ಲೆ ನಡೆಸಲು ಯತ್ನಿಸಿದ ದರೋಡೆಕೋರನ ಕಾಲಿಗೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಮಂಗಳವಾರ ನಡೆದಿದೆ.
ಆರ್‍ಟಿ ನಗರ, ಸುಲ್ತಾನ್ ಪಾಳ್ಯದ ಭುವನೇಶ್ವರಿ ನಗರದ ನಿವಾಸಿ ಯಾಸೀನ್ ರೆಹಮಾನ್ ಅಲಿಯಾಸ್ ಗೋರ್(23) ಬಂಧಿತ ಆರೋಪಿ. ಈತ ದರೋಡೆ, ಸುಲಿಗೆ, ಹಲ್ಲೆ ಹಾಗೂ ಬೆದರಿಕೆ ಸೇರಿ 9 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಜುಲೈ 7 ರಂದು ಬ್ಯಾಂಕ್ ಉದ್ಯೋಗಿಯೊಬ್ಬರು ಕೆಲಸಕ್ಕೆ ಹೋಗುತ್ತಿದ್ದಾಗ ಆಕೆಯ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದ.
ಈ ಬಗ್ಗೆ ಉದ್ಯೋಗಿ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದರೋಡೆಕೋರರ ಪತ್ತೆಗಾಗಿ ಶೇಷಾದ್ರಿಪುರಂ ಉಪವಿಭಾಗ ಪೊಲೀಸರ ನೇತೃತ್ವದಲ್ಲಿ ವೈಯಾಲಿಕಾವಲ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್, ಶೇಷಾದ್ರಿಪುರಂ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಹೈಗ್ರೌಂಡ್ಸ್ ಠಾಣೆ ಇನ್ಸ್‍ಪೆಕ್ಟರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಇದನ್ನೂ ಓದಿ: ಸಹೋದ್ಯೋಗಿಯ ರೇಗಿಸಿದ್ದಕ್ಕೆ ಯುವಕನ ಹತ್ಯೆಗೈದ ಟ್ರಾವೆಲ್ ಏಜೆಂಟ್
ಈ ತಂಡ ದರೋಡೆಕೋರರನಿಗಾಗಿ ಶೋಧ ಕೈಗೊಂಡು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆಗೊಳಪಡಿಸಿದಾಗ ದರೋಡೆಕೋರ ಯಾಸೀನ್ ಬಗ್ಗೆ ಹೇಳಿದ್ದ. ಈ ನಡುವೆ ಶೇಷಾದ್ರಿಪುರಂ ಠಾಣೆ ಇನ್ಸ್‍ಪೆಕ್ಟರ್ ಇಂದು ಬೆಳಗ್ಗೆ ಗಸ್ತಿನಲ್ಲಿದ್ದಾಗ ದರೋಡೆಕೋರ ಅರಮನೆ ಮೈದಾನದ ಲೇಕ್ ರಸ್ತೆಯಲ್ಲಿ ಬರುತ್ತಿದ್ದಾನೆಂಬ ಮಾಹಿತಿ ಲಭಿಸಿದೆ.
ತಕ್ಷಣ ಇನ್ಸ್‍ಪೆಕ್ಟರ್ ಅವರು ಸಿಬ್ಬಂದಿಯೊಂದಿಗೆ ಬೆಳಗಿನ ಜಾವ 5.30ರ ಸುಮಾರಿನಲ್ಲಿ ದರೋಡೆಕೋರನ ಬಂಧನಕ್ಕೆ ತೆರಳಿ ಲೇಕ್ ರಸ್ತೆಯಲ್ಲಿ ದರೋಡೆಕೋರರನ್ನು ಹಿಡಿಯಲು ಹೋದಾಗ ಆತ ಕಾನ್ಸ್‍ಟೇಬಲ್ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಆ ಸಂದರ್ಭದಲ್ಲಿ ಇನ್ಸ್‍ಪೆಕ್ಟರ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಎಚ್ಚರಿಸಿದ್ದಾರೆ.
ಇನ್ಸ್‍ಪೆಕ್ಟರ್ ಮಾತನ್ನು ಲೆಕ್ಕಿಸದೆ ಹಿಡಿಯಲು ಹೋದ ಕಾನ್ಸ್‍ಟೇಬಲ್ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ಆರೋಪಿಯ ಬಲಗಾಲಿಗೆ ತಗುಲಿದಾಗ ಆತ ಕುಸಿದುಬಿದ್ದಿದ್ದ. ಕೂಡಲೇ ಪೊಲೀಸರು ಆತನನ್ನು ಸುತ್ತುವರೆದು ಬಂಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಆರೋಪಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಸದಾಶಿವ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.