ಬೆಂಗಳೂರು: ಸ್ನೇಹಿತೆಯನ್ನು ಬೀಳ್ಕೊಡಲು ನಕಲಿ ಟಿಕೆಟ್‍ನೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದ ಯುವಕನನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಬಂಧಿಸಿರುವುದಾಗಿ ವರದಿಯಾಗಿದೆ.
ಜಾರ್ಖಂಡ್ ಮೂಲದ ಪ್ರಖರ್ ಶ್ರೀವಾಸ್ತವ(24 ವರ್ಷ) ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಪ್ರಖರ್ ಶ್ರೀವಾಸ್ತವನ ಸ್ನೇಹಿತೆ ಬೆಂಗಳೂರಿನಿಂದ ಹೊಸದಿಲ್ಲಿಗೆ ವಿಮಾನ ಮೂಲಕ ಪ್ರಯಾಣ ಬೆಳೆಸಲು ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸ್ನೇಹಿತೆಯನ್ನು ಕಳುಹಿಸಲು ಪ್ರಖರ್ ಶ್ರೀವಾಸ್ತವ, ಪ್ರಯಾಣದ ನಕಲಿ ಟಿಕೆಟ್ ತಯಾರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ ಎನ್ನಲಾಗಿದೆ.
ನಕಲಿ ಟಿಕೆಟ್ ಅನ್ನು ತೋರಿಸಿ, ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದಾನೆ. ಆದರೆ ವಿಮಾನದಲ್ಲಿ ಪ್ರಯಾಣಿಸದೆ, ಸ್ನೇಹಿತೆಯನ್ನು ಕಳುಹಿಸಿ ವಾಪಸ್ ಹಿಂತಿಗಿದ್ದಾನೆ. ಆಗ ಗೇಟ್ ನಂ.9ರ ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ, ನನಗೆ ತುರ್ತು ಕರೆ ಬಂದಿದೆ, ಹೀಗಾಗಿ ಮರಳಿ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಪ್ರಖರ್ ನ ಪ್ರಯಾಣದ ಟಿಕೆಟ್ ಅನ್ನು ಮತ್ತೊಮ್ಮೆ ಪರಿಶೀಲಿಸಿದಾಗ ನಕಲಿ ಎಂಬುವುದು ತಿಳಿದು ಬಂದಿದೆ.
ಕೂಡಲೆ ಪ್ರಖರ್ ಶ್ರೀವಾಸ್ತವನನ್ನು ವಿಮಾನ ನಿಲ್ದಾಣದ ಪೊಲೀಸರು ವಶಕ್ಕೆ ಪಡೆದುಕೊಂಡು, ತೀವ್ರ ವಿಚಾರಣೆ ನಡೆಸಿದಾಗ ಸ್ನೇಹಿತೆಯನ್ನು ಬೀಳ್ಕೊಡಲು ವಿಮಾನ ಟಿಕೆಟ್ ಅನ್ನು ನಕಲಿ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಗೊತ್ತಾಗಿದೆ.
ವಿಮಾನ ನಿಲ್ದಾಣದ ಒಳಗೆ ಅತಿಕ್ರಮಣ, ನಕಲಿ ಟಿಕೆಟ್ ಮತ್ತು ವಂಚನೆಯ ಅಡಿಯಲ್ಲಿ ಆರೋಪಿ ವಿರುದ್ಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.