Home ಕರ್ನಾಟಕ ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಚೆಕ್‌ ಪೋಸ್ಟ್: ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಚೆಕ್‌ ಪೋಸ್ಟ್: ಪೊಲೀಸ್ ಆಯುಕ್ತ ಬಿ.ದಯಾನಂದ್

42
0

ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಚೆಕ್ ಪೋಸ್ಟ್ ಗಳಂತೆ ನಗರದಾದ್ಯಂತ ನೂರಕ್ಕೂ ಹೆಚ್ಚು ಚೆಕ್‌ ಪೋಸ್ಟ್ ಗಳನ್ನು ನಿರ್ಮಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚೆಕ್‌ ಪೋಸ್ಟ್‌ ಗಳು ದಿನದ 24 ಗಂಟೆಗಳಲ್ಲೂ ಕಾರ್ಯನಿರ್ವಹಿಸುತ್ತವೆ. ಮೂರು ಪಾಳಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

ಈ ಚೆಕ್‌ ಪೋಸ್ಟ್ ಗಳಲ್ಲಿ ನಮ್ಮ ಪೊಲೀಸರು, ಬಿಬಿಎಂಪಿ, ಆರ್ಟಿಒ, ಅಬಕಾರಿ, ವಾಣಿಜ್ಯ ತೆರಿಗೆ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುತ್ತಾರೆ. ಆ ರಸ್ತೆಗಳಲ್ಲಿ ಬರುವ ಪ್ರತಿಯೊಂದು ವಾಹನವನ್ನು ಈ ಸಿಬ್ಬಂದಿಗಳು ಸೂಕ್ಷ್ಮವಾಗಿ ಪರಿಶೀಲನೆ ಮಾಡಲಿದ್ದಾರೆ ಎಂದು ಬಿ.ದಯಾನಂದ್ ಹೇಳಿದರು.

ಒಂದು ವೇಳೆ ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡುಬಂದರೆ ತಕ್ಷಣ ಅವುಗಳನ್ನು ಜಪ್ತಿಮಾಡಿಕೊಂಡು ಪ್ರಕರಣ ದಾಖಲಿಸಲಾಗುವುದು. ಇಲ್ಲವೇ, ಸೂಕ್ತ ದಾಖಲೆಗಳನ್ನು ಕೊಟ್ಟರೆ ವಶಪಡಿಸಿಕೊಂಡಿರುವ ಹಣ ಹಾಗೂ ಇನ್ನಿತರೆ ವಸ್ತುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಬಿ.ದಯಾನಂದ್ ತಿಳಿಸಿದರು.

ಲೋಕಸಭಾ ಚುನಾವಣೆ ನಿಮಿತ್ತ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಈಗಾಗಲೇ ಕೇಂದ್ರದಿಂದ ಸಿಐಎಸ್ಎಫ್ ನ ಒಂದು ತುಕಡಿ ಬಂದಿದೆ. ಹಂತ ಹಂತವಾಗಿ ಕೇಂದ್ರ ಪಡೆಗಳು ಬರಲಿವೆ ಎಂದು ಬಿ.ದಯಾನಂದ್ ತಿಳಿಸಿದರು.

ಸ್ಥಳೀಯ ಪೊಲೀಸರೊಂದಿಗೆ ಕೇಂದ್ರ ಪಡೆಗಳನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗುವುದು. ಒಟ್ಟಾರೆ ಮುಕ್ತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ನಾವು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೇವೆ ಎಂದು ಬಿ.ದಯಾನಂದ್ ಹೇಳಿದರು.

LEAVE A REPLY

Please enter your comment!
Please enter your name here