Home Uncategorized ಬೆಂಗಳೂರು: ನಟ ರಜನೀಕಾಂತ್ ಪತ್ನಿ ಕೋರ್ಟ್‍ಗೆ ಹಾಜರು, ಜಾಮೀನು ಮಂಜೂರು

ಬೆಂಗಳೂರು: ನಟ ರಜನೀಕಾಂತ್ ಪತ್ನಿ ಕೋರ್ಟ್‍ಗೆ ಹಾಜರು, ಜಾಮೀನು ಮಂಜೂರು

23
0

ಬೆಂಗಳೂರು: ‘ಕೊಚ್ಚಾಡಿಯನ್’ ಸಿನಿಮಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ನಟ ರಜನೀಕಾಂತ್ ಪತ್ನಿ ಲತಾ ಅವರಿಗೆ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕೋರ್ಟ್‍ಗೆ ಖುದ್ದು ಹಾಜರಾಗಿದ್ದ ಲತಾ ರಜನೀಕಾಂತ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 1ನೇ ಎಸಿಎಂಎಂ ನ್ಯಾಯಪೀಠದ ನ್ಯಾಯಾಧೀಶ ಆನಂದ್ ಎಸ್. ಕರಿಯಮ್ಮನವರ್ ಅವರು ಪುರಸ್ಕರಿಸಿದ್ದಾರೆ.

ಲತಾ ಅವರಿಗೆ ನ್ಯಾಯಪೀಠವು ತಾನು ಸೂಚಿಸಿದಾಗ ಕೋರ್ಟ್‍ಗೆ ಹಾಜರಾಗಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ, ಅವರಿಗೆ ಜಾಮೀನು ಮಂಜೂರು ಮಾಡಿದೆ.

ಡಿ.1ರಂದು ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಲತಾ ರಜನೀಕಾಂತ್ ಅವರಿಗೆ ಜ.6ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಲತಾ ಅವರು ಜಾಮೀನು ಪಡೆದುಕೊಂಡಿದ್ದಾರೆ.

ಪ್ರಕರಣವೇನು?: ಚೆನ್ನೈನ ಆಡ್ ಬ್ಯುರೊ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್ ನೀಡಿರುವ ದೂರಿನ ಅನ್ವಯ ಆಡ್ ಬ್ಯೂರೊ ಅಡ್ವರ್ಟೈಸಿಂಗ್ ಕಂಪೆನಿಯಾಗಿದ್ದು, ಸಿನಿಮಾ ನಿರ್ಮಾಣದಲ್ಲಿ ಪೋಸ್ಟ್  ಪ್ರೋಡಕ್ಷನ್ ಮಾಡುತ್ತದೆ. ತಮಿಳಿನ ಕೊಚ್ಚಾಡಿಯನ್ ಸಿನಿಮಾದ ಪೋಸ್ಟ್ ಪ್ರೋಡಕ್ಷನ್ ಅನ್ನು 14.9 ಕೋಟಿ ರೂ.ಗೆ ಆಡ್ ಬ್ಯುರೊ ಕಂಪೆನಿಯು ಮೀಡಿಯಾ ಒನ್ ಗ್ಲೋಬಲ್ ಕಂಪೆನಿಯ ಜೊತೆಗೆ ನಡೆಸಿತ್ತು. ಇದಕ್ಕೆ ಲತಾ ರಜನೀಕಾಂತ್ ಅವರು ಖಾತರಿ ನೀಡಿದ್ದು, ಈ ಸಂಬಂಧ ಒಪ್ಪಂದ ಸಹ ಆಗಿತ್ತು. ಸಿನಿಮಾ ಬಿಡುಗಡೆಯಾದ ಬಳಿಕ 8.70 ಕೋಟಿ ರೂ.ಗಳನ್ನು ಲತಾ ಅವರು ಪಾವತಿಸಿದ್ದು, 6.20 ಕೋಟಿ ರೂ.ಬಾಕಿ ಪಾವತಿಸಬೇಕಿತ್ತು. ಇದನ್ನು ಪಾವತಿಸಲು ಇಚ್ಛಿಸದ ಲತಾ ಅವರು ದಿ ಪಬ್ಲಿಷರ್ಸ್ ಮತ್ತು ಬ್ರಾಡಕಾಸ್ಟರ್ಸ್ ವೆಲ್‍ಫೇರ್ ಅಸೋಸಿಯೇಶನ್ ಇಂಡಿಯಾ ಪ್ರೆಸ್ ಕ್ಲಬ್ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿದ್ದು, ಅದನ್ನು ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯವು ವಜಾ ಮಾಡಿತ್ತು.

ಲತಾ ಅವರು ನ್ಯಾಯಾಲಯಕ್ಕೆ ವಂಚಿಸಿದ್ದು, ದೂರುದಾರ ಆಡ್ ಬ್ಯುರೊ ಕಂಪೆನಿಗೆ ವಂಚಿಸುವ ಉದ್ದೇಶದಿಂದ ನಕಲಿ ಪತ್ರ ಸೃಷ್ಟಿಸಿದ್ದಾರೆ ಎಂದು ಚೆನ್ನೈನ ಆಡ್ ಬ್ಯುರೊ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಬಿರ್ ಚಂದ್ ನಹರ್ ಅವರು 2015ರ ಜೂ.9ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಬೆಂಗಳೂರಿನ ಹಲಸೂರು ಗೇಟ್ ಠಾಣೆಯ ಪೊಲೀಸರು ಲತಾ ಅವರ ವಿರುದ್ಧ ಐಪಿಸಿ ಸೆಕ್ಷನ್‍ಗಳಾದ 196 ಸೇರಿ ವಿವಿಧ ಸೆಕ್ಷನ್‍ಗಳ ಅಡಿ ಎಫ್‍ಐಆರ್ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here