ಬೆಂಗಳೂರು: ಪ್ರತಿಷ್ಠಿತ ಲೈಫ್ ಇನ್ಶೂರೆನ್ಸ್ ಕಂಪೆನಿಗಳ ಹೆಸರಿನಲ್ಲಿ ನಕಲಿ ವೆಬ್‍ಸೈಟ್ ತೆರೆದು ಲಕ್ಷಾಂತರ ರೂಪಾಯಿ ವಂಚಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಇಲ್ಲಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನೋಯ್ಡಾ ಮೂಲದ ಮನವೀರ್ ಸಿಂಗ್(38) ಎಂಬುವನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯು ಆನ್‍ಲೈನ್‍ನಲ್ಲಿ ಪ್ರತಿಷ್ಠಿತ ಇನ್ಶೂರೆನ್ಸ್ ಕಂಪೆನಿಗಳ ನಕಲಿ ವೆಬ್‍ಸೈಟ್ ಹರಿ ಬಿಟ್ಟಿದ್ದ. ಇದನ್ನು ಸರ್ಚ್ ಮಾಡಿದ ಜನ, ಇನ್ಶೂರೆನ್ಸ್ ಮಾಡಿಸಲು ಮುಂದಾಗುತ್ತಿದ್ದರು ಎಮ್ಮಲಾಗಿದೆ
ಬಳಿಕ ಆನ್‍ಲೈನ್ ಮೂಲಕವೇ ಸಾರ್ವಜನಿಕರು ಆರೋಪಿಯನ್ನು ಸಂಪರ್ಕಿಸುತ್ತಿದ್ದರು. ನಂತರ ಸಾರ್ವಜನಿಕರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಭಾವಚಿತ್ರ, ಬ್ಯಾಂಕ್ ಚೆಕ್ ಸೇರಿ ಹಲವು ದಾಖಲೆಗಳನ್ನು ಪಡೆಯುತ್ತಿದ್ದ. ಇದಾದ ಬಳಿಕ ಸಾರ್ವಜನಿಕರಿಗೆ ನಕಲಿ ಪಾಲಿಸಿ ಬಾಂಡ್ ಕಳುಹಿಸಿ, ಪ್ರತಿ ತಿಂಗಳು ಇನ್ಸೂರೆನ್ಸ್ ಹಣವನ್ನು ತಾನೇ ಖಾತೆಗೆ ಹಾಕಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.
ಹೀಗೆಯೇ ಆರೋಪಿ ನಗರದಲ್ಲಿ ಹಲವರಿಗೆ ವಂಚಿಸಿದ್ದು, ಈ ಸಂಬಂಧ 34 ಪ್ರಕರಣ ದಾಖಲಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದ್ದು, ಸುಮಾರು 4.5 ಕೋಟಿ ರೂ. ವಂಚನೆ ಬೆಳಕಿಗೆ ಬಂದಿದೆ. ಜೊತೆಗೆ ಆರೋಪಿಯ ಆರು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ 15 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.