Home Uncategorized ಬೆಂಗಳೂರು| ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆಗೈದ ಮಹಿಳೆ: ಆರೋಪಿಗಳ ಬಂಧನ

ಬೆಂಗಳೂರು| ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆಗೈದ ಮಹಿಳೆ: ಆರೋಪಿಗಳ ಬಂಧನ

39
0

ಬೆಂಗಳೂರು: ಗಂಡನನ್ನು ಹತ್ಯೆಗೈದು, ಅಸಹಜ ಸಾವು ಎಂಬುದಾಗಿ ಪೊಲೀಸರೆದುರು ಸುಳ್ಳು ಹೇಳಿದ್ದ ಆರೋಪದಡಿ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಇಲ್ಲಿನ ಎಚ್‍ಎಸ್‍ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ವೆಂಕಟರಮಣ ನಾಯಕ್(35) ಎಂಬಾತನನ್ನು ಹತ್ಯೆ ಮಾಡಿದ್ದ ಆತನ ಪತ್ನಿ ನಂದಿನಿ ಹಾಗೂ ಪ್ರಿಯಕರ ನಿತೀಶ್ ಕುಮಾರ್ ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಎಚ್‍ಎಸ್‍ಆರ್ ಲೇಔಟ್ ಎರಡನೇ ಸೆಕ್ಟರ್ ನ ಮನೆಯೊಂದರಲ್ಲಿ ರಾತ್ರಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡು ವಾಸವಿದ್ದ ವೆಂಕಟರಮಣನನ್ನು ಜ.9ರ ಮಂಗಳವಾರ ರಾತ್ರಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈಯ್ಯಲಾಗಿತ್ತು. ಮನೆಯ ಬಾತ್ ರೂಮ್ ಬಳಿ ಶವ ಪತ್ತೆಯಾಗಿತ್ತು.

ವೆಂಕಟರಮಣ ಭದ್ರತಾ ಸಿಬ್ಬಂದಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಅಲ್ಲಿಯೇ ವಾಸವಿದ್ದ. ಆದರೆ, ಜ.10ರ ಬುಧವಾರ ಬೆಳಗ್ಗೆ ಬಾತ್‍ರೂಮ್ ಬಳಿ ಅನುಮಾನಾಸ್ಪದವಾಗಿ ತನ್ನ ಗಂಡನ ಶವ ಪತ್ತೆಯಾಗಿದೆ ಎಂದು ಆತನ ಪತ್ನಿ ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದಾಗ, ಆತ ಹತ್ಯೆಯಾಗಿರುವುದು ತಿಳಿದು ಬಂದಿತ್ತು. ಮೃತನ ತಂದೆಯಿಂದ ದೂರು ಪಡೆದಿದ್ದ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಆಂಧ್ರಪ್ರದೇಶ ಮೂಲದ ನಂದಿನಿ ಹಾಗೂ ನಿತೀಶ್ ಕುಮಾರ್ ಬಾಲ್ಯದಿಂದಲೂ ಪರಿಚಯವಿದ್ದವರು. ನಂದಿನಿ ಮದುವೆಯಾದ ಬಳಿಕವೂ ನಿತೀಶ್ ಕುಮಾರ್ ಆಗಾಗ ಆಕೆಯನ್ನು ಭೇಟಿಯಾಗುತ್ತಿದ್ದ. ಜನವರಿ 6ರಂದು ಗಂಡ ಮನೆಯಲ್ಲಿರದಿದ್ದಾಗ ನಿತೀಶ್ ಕುಮಾರನಿಗೆ ಕರೆ ಮಾಡಿ ನಂದಿನಿ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಮನೆಯಲ್ಲಿದ್ದಾಗ ದಿಢೀರನೆ ಗಂಡ ವೆಂಕಟರಮಣ ಮನೆಗೆ ಬಂದಿದ್ದ. ಈ ವೇಳೆ ಇಬ್ಬರು ಸೇರಿ ವೆಂಕಟರಮಣನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಮನೆಯ ಹೊರಗಿರುವ ಶೌಚಾಲಯದ ಬಳಿ ಇಟ್ಟು, ಪಕ್ಕದಲ್ಲಿ ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎನ್ನುವಂತೆ ಬಿಂಬಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು, ಪರಿಚಿತರಿಂದಲೇ ಹತ್ಯೆಯಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳ ಸಂಚಿನ ಅಸಲಿ ವಿಚಾರ ಬಯಲಿಗೆ ಬಂದಿದೆ. ಈಗ ಆರೋಪಿ ನಂದಿನಿ ಹಾಗೂ ಆಕೆಯ ಪ್ರಿಯಕರ ನಿತೀಶ್ ಕುಮಾರನನ್ನು ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಬಂಧಿಸಿದ್ದು ಕ್ರಮ ಜರುಗಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here