ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದ್ದ ಬಂದ್ ಅನ್ನು ಧಿಕ್ಕರಿಸಿ ಆಟೋ ಮತ್ತು ಕ್ಯಾಬ್ ಚಲಾಯಿಸಿದ ಚಾಲಕರ ಮೇಲೆ ಪ್ರತಿಭಟನಾನಿರತು ಹಲ್ಲೆ ನಡೆಸಿ, ನಿಂದಿಸಿದ್ದಾರೆ. ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದ್ದ ಬಂದ್ ಅನ್ನು ಧಿಕ್ಕರಿಸಿ ಆಟೋ ಮತ್ತು ಕ್ಯಾಬ್ ಚಲಾಯಿಸಿದ ಚಾಲಕರ ಮೇಲೆ ಪ್ರತಿಭಟನಾನಿರತರು ಹಲ್ಲೆ ನಡೆಸಿ, ನಿಂದಿಸಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ನಡೆದ ಹಲ್ಲೆಯ ಹಲವಾರು ವಿಡಿಯೋಗಳು ಟ್ವಿಟರ್‌ನಲ್ಲಿ ಹರಿದಾಡಿವೆ. ದೃಶ್ಯದಲ್ಲಿ, ಪ್ರತಿಭಟನಾಕಾರರು ಆಟೋ ಮತ್ತು ಕ್ಯಾಬ್ ಅನ್ನು ತಡೆದು, ಟೈರ್‌ಗಳ ಗಾಳಿ ಬಿಡುವುದು ಮತ್ತು ಖಾಸಗಿ ವಾಹನಗಳಿಗೆ ಹಾನಿಯುಂಟು ಮಾಡುತ್ತಿರುವುದು ಕಂಡುಬಂದಿದೆ.
ಈ ಸಂಬಂಧ ಬೆಂಗಳೂರು ನಗರ ಪೊಲೀಸರು ಒಟ್ಟು 13 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 12 ಮಂದಿಯನ್ನು ಬಂಧಿಸಿದ್ದಾರೆ.
ಬಂದ್‌ನಲ್ಲಿ ಭಾಗವಹಿಸುವಂತೆ ಚಾಲಕರನ್ನು ಒತ್ತಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ ನಂತರವೂ, ಪ್ರತಿಭಟನಾಕಾರರು ಜನರ ಮೇಲೆ ಹಲ್ಲೆ ನಡೆಸಿ, ವಾಹನಗಳಿಗೆ ಹಾನಿ ಮಾಡಿದ ಹಲವಾರು ನಿದರ್ಶನಗಳು ವರದಿಯಾಗಿವೆ.
ಔಟರ್ ರಿಂಗ್ ರೋಡ್ ಕಂಪನಿಗಳ ಅಸೋಸಿಯೇಷನ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಸೆರೆಯಾಗಿದೆ. ಮೂವರಿದ್ದ ಗುಂಪೊಂದು ಕ್ಯಾಬ್ ಅನ್ನು ನಿಲ್ಲಿಸಿ, ಅದರ ಮೇಲೆ ಕಲ್ಲು ತೂರಾಟ ನಡೆಸಿದೆ. ಇದೇ ರೀತಿಯ ಘಟನೆ ಎಸ್‌ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರತಿಭಟನಾಕಾರರು ರಾಪಿಡೋ ಬೈಕ್ ಸವಾರನೊಬ್ಬರ ಮೇಲೆ ದೈಹಿಕ ಹಲ್ಲೆ ಮತ್ತು ಕಲ್ಲು ತೂರಾಟ ನಡೆಸಿದ್ದಾರೆ.
ಹಲ್ಲೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಔಟರ್ ರಿಂಗ್ ರೋಡ್ ಕಂಪನಿಗಳ ಅಸೋಸಿಯೇಷನ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.