Home ಕರ್ನಾಟಕ ಬೆಂಗಳೂರು : ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಮಗನನ್ನು ಹತ್ಯೆಗೈದ ತಂದೆ

ಬೆಂಗಳೂರು : ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಮಗನನ್ನು ಹತ್ಯೆಗೈದ ತಂದೆ

33
0

ಬೆಂಗಳೂರು: ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆಗೈದಿರುವ ಘಟನೆ ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಮಾ.6ರಂದು ಮಗ ಯೋಗೇಶ್(21) ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಂದೆ ಪ್ರಕಾಶ್(55) ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣ ಬಯಲಾದ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ ಎಂದು ಬಸವೇಶ್ವರ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರಕಾಶ್, ಪಾನೀಪುರಿ ವ್ಯಾಪಾರ ಮಾಡಿಕೊಂಡಿದ್ದರೆ ಆತನ ಮಗ ಯೋಗೇಶ್ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಆದರೆ, ವ್ಯಾಸಂಗದ ನಡುವೆ ಪ್ರತಿದಿನ ಮದ್ಯ ಸೇವಿಸಿ ಬಂದು ಮನೆಯಲ್ಲಿ ಜಗಳವಾಡುತ್ತಿದ್ದ. ಇದರಿಂದ ಯೋಗೇಶ್ ಹಾಗೂ ಪ್ರಕಾಶ್ ನಡುವೆ ಗಲಾಟೆಯಾಗುತ್ತಿತ್ತು. ಎಷ್ಟು ಬಾರಿ ಬುದ್ಧಿ ಹೇಳಿದರೂ ಯೋಗೇಶ್ ತನ್ನ ತಂದೆಯ ಮಾತು ಕೇಳುತ್ತಿರಲಿಲ್ಲ ಎನ್ನಲಾಗಿದೆ.

ಮಾ.6ರಂದು ಮತ್ತೆ ಕುಡಿದು ಬಂದಿದ್ದ ಯೋಗೇಶ್ ಹಾಗೂ ಪ್ರಕಾಶ್ ನಡುವೆ ಆರಂಭವಾದ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ತಂದೆ ಪ್ರಕಾಶ್ ಯೋಗೇಶ್‍ನ ಕೆನ್ನೆಗೆ ಬಾರಿಸಿದ್ದ. ಪರಿಣಾಮ ಯೋಗೇಶ್ ಕೆಳಗೆ ಬಿದ್ದಿದ್ದ. ಕೋಪದಲ್ಲಿಯೇ ತಂದೆ ಪ್ರಕಾಶ್ ನೆಲಕ್ಕೆ ಬಿದ್ದಿದ್ದ ಯೋಗೇಶ್‍ನ ಕತ್ತು ಹಿಸುಕಿದ್ದ. ಸ್ವಲ್ಪ ಹೊತ್ತಿನ ಬಳಿಕ ಮಗನ ಉಸಿರು ನಿಂತ ಕಾರಣ ಆಸ್ಪತ್ರೆಗೆ ಕೊಂಡೊಯ್ದಿದ್ದನಾದರೂ ಆತ ಮೃತಪಟ್ಟಿದ್ದ. ಬಳಿಕ ಪೊಲೀಸರ ಮುಂದೆ ಪ್ರಕಾಶ್, ‘ತನ್ನ ಮಗ ನೇಣುಬಿಗಿದುಕೊಂಡಿದ್ದಾನೆ’ ಎಂದು ಹೇಳಿಕೆ ನೀಡಿದ್ದ ಎಂದು ತಿಳಿದು ಬಂದಿದೆ.

ಆದರೆ, ಆರೋಪಿಯ ಹೇಳಿಕೆಯ ಬಗ್ಗೆ ಅನುಮಾನಗೊಂಡ ಪೊಲೀಸರು, ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾದಿದ್ದರು. ವರದಿಯಲ್ಲಿ ಕತ್ತು ಹಿಸುಕಿದ ಕಾರಣದಿಂದ ಯೋಗೇಶ್ ಸಾವನ್ನಪ್ಪಿರುವುದು ಬಯಲಾಗಿತ್ತು. ತಕ್ಷಣ ಪ್ರಕಾಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ತಂದೆ ಪ್ರಕಾಶ್‍ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here