ಬೆಂಗಳೂರು: ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ರಸ್ತೆಯಲ್ಲಿ ಕಂಡ ಕಂಡಲ್ಲಿ ಕನ್ನಡ ಕಾಣದ ಹತ್ತಾರು ನಾಮಫಲಕಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ ಕೆಲವೆಡೆ ಕಲ್ಲು ತೋರಾಟ ನಡೆಸಿ ಆಕ್ರೋಶ ಹೊರಹಾಕಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಹಲವು ಹೋರಾಟಗಾರರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಕನ್ನಡ ನಾಮಫಲಕ ವಿವಾದ ಸಂಬಂಧ ನ್ಯಾಯಾಲಯಕ್ಕೆ ಹೋಗಿರುವ ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾ ವಿರುದ್ಧ ಕರವೇ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾಲ್ ಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಇದರಿಂದ ಮತ್ತಷ್ಟು ಕೆರಳಿದ ಹೋರಾಟಗಾರರು, ಚಪ್ಪಲಿ, ಕಲ್ಲು ತೋರಾಟ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೂ, ಮಾಲ್‍ನ ಮುಖ್ಯ ಗೇಟ್ ಬಳಿ ಪೊಲೀಸ್ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಿಂತಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಮಾಲ್‍ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಬುಧವಾರ ಇಲ್ಲಿನ ವಿಮಾನ ನಿಲ್ದಾಣ ರಸ್ತೆ ಸಾದಹಳ್ಳಿಯಿಂದ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕಬ್ಬನ್ ಪಾರ್ಕ್‍ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆರಂಭದಲ್ಲಿಯೇ ಕರವೇ ಕಾರ್ಯಕರ್ತರು ರಸ್ತೆಯುದ್ದಕ್ಕೂ ಇಂಗ್ಲೀಷ್, ಹಿಂದೆ ನಾಮಫಲಕಗಳನ್ನು ಧ್ವಂಸಗೊಳಿಸಿ ಘೋಷಣೆ ಕೂಗಿದರು. ಜತೆಗೆ, ಮೆರವಣಿಯ ಮಾರ್ಗದಲ್ಲಿ ಕನ್ನಡ ನಾಮಫಲಕಗಳನ್ನು ಹಾಕದ ಅಂಗಡಿ ಮುಂಗಟ್ಟುಗಳ ಮಾಲಕರಿಗೆ ಎಚ್ಚರಿಕೆ ನೀಡಿದರು.
ಮೆರವಣಿಗೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಹೋರಾಟಗಾರರನ್ನು ನಗರ ಭಾಗಗಕ್ಕೆ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಿದರು.ಆದರೆ, ಮೆರವಣಿಗೆ ಮುಂದುವರೆಸಲು ಯತ್ನಿಸಿದಾಗ ಟಿ.ಎ.ನಾರಾಯಣಗೌಡ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದು, ಆಟೊ, ಬಸ್ಸುಗಳಲ್ಲಿ ಠಾಣೆಗೆ ಕರೆದೊಯ್ದರು.
ಎಲ್ಲಲ್ಲಿ ಮೆರವಣಿಗೆ..!
ಸಾದಹಳ್ಳಿ ಟೋಲ್ ಗೇಟ್‍ನಿಂದ ಆರಂಭಗೊಂಡ ಮೆರವಣಿಗೆ ಯಲಹಂಕ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಎಸ್ಪಿ ರಸ್ತೆ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವೆನ್ಯೂ ರಸ್ತೆ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ಹಮ್ಮಿಕೊಳ್ಳಲಾಗಿತ್ತು.ಆದರೆ, ಪೊಲೀಸರು ಬಾಗಲೂರು ವ್ಯಾಪ್ತಿಯಲ್ಲಿಯೇ ಹೋರಾಟಗಾರರನ್ನು ತಡೆದರು.
►ಯುಬಿ ಸಿಟಿ ಮಾಲ್‍ಗೆ ನುಗ್ಗಿದ ಕರವೇ ಕಾರ್ಯಕರ್ತರು ಇಂಗ್ಲಿಷ್ ಬರಹಗಳಿಗೆ ಮಸಿ ಬಳೆದು ಆಕ್ರೋಶ ಹೊರಹಾಕಿದರು.
► ಮೆರವಣಿಯಲ್ಲಿ ಕೆಲವು ಕಡೆ ಲೈಟಿಂಗ್ ಬೋರ್ಡ್ ಕೂಡ ಒಡೆದು ಹಾಕಿ, ಹತ್ತಾರು ಅಡಿಯ ನಾಮಫಲಕ ಬೋರ್ಡ್‍ಗಳನ್ನು ಫಲಕಗಳನ್ನು ಕೀಳಲು ಯತ್ನಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.