ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಓಡಾಡುವವರು ನಾಳೆ ಜುಲೈ 1ರಿಂದ ಹೆಚ್ಚಿನ ಟೋಲ್ ದರ ಪಾವತಿಸಬೇಕಾಗುತ್ತದೆ. ಕಾರಿನಲ್ಲಿ ಸಂಚರಿಸುವವರು ಏಕಮುಖ ಸಂಚಾರಕ್ಕೆ 320 ರೂಪಾಯಿ ಹಾಗೂ ಪ್ರಯಾಣಿಕರು 24 ತಾಸಿನೊಳಗೆ ಹಿಂತಿರುಗುವುದಾದರೆ ದ್ವಿಮುಖ ಸಂಚಾರಕ್ಕೆ 485 ರೂಪಾಯಿ ಪಾವತಿಸಬೇಕಾಗುತ್ತದೆ. ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ (Bengaluru-Mysuru expressway) ಓಡಾಡುವವರು ನಾಳೆ ಜುಲೈ 1ರಿಂದ ಹೆಚ್ಚಿನ ಟೋಲ್ ದರ ಪಾವತಿಸಬೇಕಾಗುತ್ತದೆ. ಕಾರಿನಲ್ಲಿ ಸಂಚರಿಸುವವರು ಏಕಮುಖ ಸಂಚಾರಕ್ಕೆ 320 ರೂಪಾಯಿ ಹಾಗೂ ಪ್ರಯಾಣಿಕರು 24 ತಾಸಿನೊಳಗೆ ಹಿಂತಿರುಗುವುದಾದರೆ ದ್ವಿಮುಖ ಸಂಚಾರಕ್ಕೆ 485 ರೂಪಾಯಿ ಪಾವತಿಸಬೇಕಾಗುತ್ತದೆ. ಇದು ನಾಳೆ ಬೆಳಗ್ಗೆ 8 ಗಂಟೆಯಿಂದ ಜಾರಿಗೆ ಬರಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಮೈಸೂರು ಮತ್ತು ನಿಡಘಟ್ಟ ನಡುವೆ ಮದ್ದೂರಿನಲ್ಲಿ ಟೋಲ್ ಸಂಗ್ರಹಕ್ಕೆ ನಿರ್ಧಾರ ಮಾಡಿದ ನಂತರ ಟೋಲ್ ಶುಲ್ಕ ಹೆಚ್ಚಳವಾಗಿದೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಇದು ಎರಡನೇ ಟೋಲ್ ಪ್ಲಾಜಾವಾಗಿದೆ. ಈಗಿರುವ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಏಕಮುಖ ಸಂಚಾರಕ್ಕೆ ಕಾರುಗಳಿಗೆ 165 ರೂಪಾಯಿ ಪಾವತಿಸಬೇಕಾಗುತ್ತದೆ.
ಎರಡನೇ ಟೋಲ್ ಪ್ಲಾಜಾದಲ್ಲಿ ಯಾವ ವಾಹನಕ್ಕೆ ಎಷ್ಟು ಟೋಲ್ ದರ?: ಎನ್ ಹೆಚ್ ಎಐ ಅಧಿಸೂಚನೆ ಪ್ರಕಾರ, ವಿವಿಧ ವಾಹನಗಳಿಗೆ ಟೋಲ್ ಶುಲ್ಕ ಈ ರೀತಿ ಇದೆ. ಕಾರುಗಳು, ಎಸ್ ಯುವಿಗಳು, ವ್ಯಾನ್ ಗಳಿಗೆ ಏಕಮುಖ ಸಂಚಾರಕ್ಕೆ ಟೋಲ್ ದರ 155 ರೂಪಾಯಿಗಳಾದರೆ 24 ಗಂಟೆಯೊಳಗೆ ದ್ವಿಮುಖ ಸಂಚಾರಕ್ಕೆ 235 ರೂಪಾಯಿ ಶುಲ್ಕ ತೆರಬೇಕಾಗುತ್ತದೆ.
ಎಲ್‌ಸಿವಿ/ಎಲ್‌ಜಿವಿ/ಮಿನಿ ಬಸ್‌ಗಳಿಗೆ ಏಕಮುಖ ಪ್ರಯಾಣಕ್ಕೆ 235 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 375 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಎರಡು ಆಕ್ಸಲ್‌ಗಳನ್ನು ಹೊಂದಿರುವ ಟ್ರಕ್‌ಗಳು/ಬಸ್‌ಗಳು ಏಕಮುಖ ಪ್ರಯಾಣಕ್ಕೆ 525 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂತಿರುಗಿದರೆ 790 ಪಾವತಿಸಬೇಕಾಗುತ್ತದೆ. ಈ ಹೊಸ ಟೋಲ್ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ಟೋಲ್ ಶುಲ್ಕಕ್ಕೆ ಹೆಚ್ಚುವರಿಯಾಗಿದೆ ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯೊಳಗೆ ಪ್ರಯಾಣಿಸುವ ವಾಣಿಜ್ಯೇತರ ವಾಹನಗಳಿಗೆ 330 ರೂಪಾಯಿ ಬೆಲೆಯ ಮಾಸಿಕ ಪಾಸ್ ನ್ನು NHAI ಒದಗಿಸುತ್ತದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜುಲೈನಿಂದ ಬೈಕ್, ಆಟೋ ಸಂಚಾರಕ್ಕೆ ನಿಷೇಧ!
ಇತ್ತೀಚೆಗಷ್ಟೇ ಹಲವು ಕನ್ನಡ ಪರ ಸಂಘಟನೆಗಳು ಟೋಲ್ ದರ ಇಳಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಆಗಾಗ್ಗೆ ರಸ್ತೆ ಅಪಘಾತಗಳು ಮತ್ತು ಸಾವುಗಳಿಂದಾಗಿ ಚರ್ಚೆಯ ಬಿಂದುವಾಗಿರುವ ಸಮಯದಲ್ಲಿ ಟೋಲ್ ಶುಲ್ಕ ಕೂಡ ಹೆಚ್ಚಳವಾಗಿದೆ.
ಕಳೆದ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು 118 ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಯೋಜನೆಯನ್ನು ಉದ್ಘಾಟಿಸಿದರು. ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರು ಗಂಟೆಗಳಿಂದ 75 ನಿಮಿಷಗಳಿಗೆ ಇಳಿಕೆ ಮಾಡುತ್ತದೆ.
117 ಕಿಲೋ ಮೀಟರ್ ರಸ್ತೆಯನ್ನು ಎರಡು ಹಂತದಲ್ಲಿ 8,408 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 117 ಕಿಮೀ ಉದ್ದದಲ್ಲಿ, 52 ಕಿಮೀ ಗ್ರೀನ್‌ಫೀಲ್ಡ್ ಐದು ಬೈಪಾಸ್‌ಗಳನ್ನು ಒಳಗೊಂಡಿದೆ.