Home Uncategorized ಬೆಂಗಳೂರು : ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದಿದ್ದ ಆರೋಪಿಯ ಬಂಧನ

ಬೆಂಗಳೂರು : ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದಿದ್ದ ಆರೋಪಿಯ ಬಂಧನ

8
0

ಬೆಂಗಳೂರು: ಸಾಲ ತೀರಿಸುವ ಸಲುವಾಗಿ ಯೂಟ್ಯೂಬ್‍ನಲ್ಲಿ ಕಳ್ಳತನ ಮಾಡುವ ರೀತಿ ನೋಡಿಕೊಂಡು ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಇಲ್ಲಿನ ಕೆ.ಪಿ ಅಗ್ರಹಾರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಕೆ.ಪಿ ಅಗ್ರಹಾರದ ಟೆಲಿಕಾಂ ಲೇಔಟ್‍ನ ಮದನ್ ಕುಮಾರ್ ಎಂಬುವನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 110 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೆಕ್ಯಾನಿಕ್ ಇಂಜಿನಿಯರ್ ಆಗಿದ್ದ ಮದನ್‍ಕುಮಾರ್, ಅಲ್ಯುಮಿನಿಯಂ ಫ್ಯಾಕ್ಟರಿ ನಡೆಸುತ್ತಿದ್ದ. ದುರಾದೃಷ್ಟವಶಾತ್ ಈತನ ಫ್ಯಾಕ್ಟರಿಗೆ ಬೆಂಕಿ ಬಿದ್ದು ಸುಮಾರು 80 ಲಕ್ಷ ರೂ. ನಷ್ಟವಾಗಿತ್ತು.

ನಷ್ಟ ಭರಿಸಲು ಹಲವರಿಂದ ಸಾಲ ಮಾಡಿ ತೀರಿಸಲಾಗದೆ ಪರಿತಪಿಸುತ್ತಿದ್ದ. ಅಲ್ಲದೆ ನಷ್ಟ ಪರಿಹಾರ ರೂಪವಾಗಿ ವಿಮೆ ಕಂಪೆನಿಯು ಕೇವಲ 2 ಲಕ್ಷ ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತು. ಲಕ್ಷಾಂತರ ರೂ. ಸಾಲದ ಜೊತೆಗೆ ಬಡ್ಡಿ ಹೆಚ್ಚಳವಾಗುತ್ತಿದ್ದಂತೆ ಸಾಲಗಾರರು ಈತನ ಹಿಂದೆ ಬಿದ್ದಿದ್ದರು. ಹೇಗಾದರೂ ಹಣ ಸಂಪಾದನೆ ಮಾಡಬೇಕೆಂಬ ಪಣ ತೊಟ್ಟ ಮದನ್, ಸಿನಿಮಾ, ವೆಬ್ ಸೀರಿಸ್‍ಗಳಿಂದ ಪ್ರೇರಿತನಾಗಿ ಕಳ್ಳತನ ಮಾಡಲು ತೀರ್ಮಾನಿಸಿದ್ದ. ಇದಕ್ಕಾಗಿ ಟೆಲಿಕಾಂ ಲೇಔಟ್‍ನಲ್ಲಿರುವ ಮನೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದ.

ಕಳ್ಳತನ ಮಾಡಲು ಬೇಕಾದ ಸಿದ್ಧತೆ ಬಗ್ಗೆ ಯೂಟ್ಯೂಬ್‍ನಲ್ಲಿ ನೋಡಿದ್ದ ಮದನ್, ಕೃತ್ಯ ಎಸಗಲು ಬೇಕಾದ ವಸ್ತುಗಳಾದ ಕೈಗೆ ಗ್ಲೌಸ್, ಮರ ಕತ್ತರಿಸುವ ಯಂತ್ರವನ್ನು ಖರೀದಿಸಿದ್ದ. ಇದೇ ತಿಂಗಳು 17ರಂದು ಮನೆಯಲ್ಲಿ ಯಾರು ಇಲ್ಲದಿರುವಾಗ ನುಗ್ಗಿ ವುಡ್‍ಕಟರ್ ನಿಂದ ಬಾಗಿಲನ್ನು ಕೊರೆದು ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.

ವಾಯುವಿಹಾರ ಮುಗಿಸಿ ಮನೆಗೆ ಮಾಲಕ ಬಂದು ನೋಡಿದಾಗ ಕಳ್ಳತನವಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಬಂಧಿತನಿಂದ 110 ಗ್ರಾಂ ಚಿನ್ನ, 450 ಗ್ರಾಂ ಬೆಳ್ಳಿ ಹಾಗೂ 1.35 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here