ಬೆಂಗಳೂರು: ನಗರದಲ್ಲಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ಸೋಮವಾರ ಬೆಳಗ್ಗೆ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸದಾರಮಂಗಲ ಪ್ರದೇಶದ ಬಳಿ ಬಿಎಂಟಿಸಿ ಬಸ್ಗೆ ವೇಗವಾಗಿ ಬರುತ್ತಿದ್ದ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಬಸ್ನ ಹಿಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂಬುದು ನಿರಾಳತೆ ತಂದಿದೆ.
ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ, ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಟಾಟಾನಗರಕ್ಕೆ ಹೊರಟಿದ್ದ ರೈಲು, ಡಿಪೋದಿಂದ ಕಾಡುಗೋಡಿ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಬಿಎಂಟಿಸಿ ಬಸ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಬಸ್ ಚಾಲಕ ರೈಲ್ವೆ ಟ್ರ್ಯಾಕ್ ಪಕ್ಕದ ಅಧಿಕೃತವಲ್ಲದ ಪ್ಯಾರಲಲ್ ರಸ್ತೆಯಲ್ಲಿ ಸಂಚರಿಸಿದ್ದಾನೆ. ಎದುರು ವಾಹನ ಬಂದ ಹಿನ್ನೆಲೆಯಲ್ಲಿ ಬಸ್ ಅನ್ನು ಹಿಂಬದಿಗೆ ತೆಗೆದುಕೊಳ್ಳುವ ಪ್ರಯತ್ನದ ವೇಳೆ, ಅದೇ ಸಮಯದಲ್ಲಿ ರೈಲು ಆಗಮಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಖಾಲಿಯಾಗಿದ್ದರಿಂದ ಭಾರೀ ಪ್ರಾಣಹಾನಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಬಳಿಕ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು ತಕ್ಷಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ರೈಲ್ವೆ ಟ್ರ್ಯಾಕ್ ಪಕ್ಕದ ಅನಧಿಕೃತ ರಸ್ತೆಯನ್ನು ಕಬ್ಬಿಣದ ಗೇಟ್ಗಳು ಮತ್ತು ಸಿಮೆಂಟ್ ಬ್ಲಾಕ್ಗಳ ಮೂಲಕ ಸಂಪೂರ್ಣವಾಗಿ ಮುಚ್ಚಲಾಗಿದೆ. ಅಲ್ಲದೆ, “ಇದು ಸಾರ್ವಜನಿಕ ರಸ್ತೆ ಅಲ್ಲ” ಎಂದು ಸೂಚಿಸುವ ಎಚ್ಚರಿಕೆ ನೋಟಿಸ್ಗಳನ್ನೂ ಅಂಟಿಸಲಾಗಿದೆ.
ಸ್ಥಳೀಯರು ಮಾತನಾಡಿ, ಸಮಯ ಉಳಿಸುವ ನೆಪದಲ್ಲಿ ಹಲವು ವಾಹನಗಳು ಈ ಅಪಾಯಕಾರಿ ಮಾರ್ಗವನ್ನು ಬಳಸುತ್ತಿದ್ದವು ಎಂದು ಆರೋಪಿಸಿದ್ದಾರೆ. ಈ ಘಟನೆ ಸಾರ್ವಜನಿಕ ಸಾರಿಗೆ ಸುರಕ್ಷತೆ ಮತ್ತು ಚಾಲಕರ ನಿರ್ಲಕ್ಷ್ಯವನ್ನು ಗಂಭೀರವಾಗಿ ಪ್ರಶ್ನಿಸುವಂತದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟನೆಯ ಕುರಿತು ತನಿಖೆ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
