ಬೆಂಗಳೂರು: ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್‍ಟಿ ಕಟ್ಟದೆ ವಂಚನೆ ಮಾಡಿದ ಆರೋಪದಡಿ ಸಿಸಿಬಿ ಪೊಲೀಸರು ರೇಸ್‍ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ದಾಳಿ ನಡೆಸಿದ್ದು, 3.45 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ದಾಖಲೆಗಳು, ರಶೀದಿ ಇಟ್ಟುಕೊಳ್ಳದೇ ಹಣದ ವ್ಯವಹಾರ ನಡೆಸಲಾಗುತ್ತಿತ್ತು. ಪ್ರಕರಣ ಸಂಬಂಧ 66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ಐಪಿಸಿ ಸೆಕ್ಷನ್ 41ರ ಅಡಿಯಲ್ಲಿ ನೊಟೀಸ್ ನೀಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.
ಅನಧಿಕೃತವಾಗಿ ನಡೆಸಲಾಗುತ್ತಿದ್ದ ಬೆಟ್ಟಿಂಗ್‍ನ ಲಾಭ ಯಾರು ಪಡೆದುಕೊಳ್ಳುತ್ತಿದ್ದಾರೆ, ಇದರ ಹಿಂದೆ ಯಾರಿದಾರೆ ಎಂಬುದರ ಬಗ್ಗೆ ಸಿಸಿಬಿ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ರೀತಿ ಅಕ್ರಮ ಬೆಟ್ಟಿಂಗ್‍ನಿಂದ ಜಿಎಸ್‍ಟಿ ವಂಚನೆ ಆಗಿದೆ. ಶೇ.28ರಷ್ಟು ಜಿಎಸ್‍ಟಿ ಕಟ್ಟಬೇಕು. ಆದರೆ ಜಿಎಸ್‍ಟಿ ತೆರಿಗೆ ವಂಚನೆ ಮಾಡಲಾಗಿದೆ. ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸುತ್ತಿದ್ದ ಮಾಹಿತಿ ಸಿಕ್ಕಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಎಎ ಅಸೋಸಿಯೇಟ್ಸ್, ಸಾಮ್ರಾಟ್ ಅಂಡ್ ಕೋ. ನೀಲಕಂಠ, ಮೆಟ್ರೊ ಅಸೋಸಿಯೇಟ್ಸ್, ಶೆಟ್ಟಿ ಅಸೋಸಿಯೇಟ್ಸ್, ಮೇಘನ ಎಂಟರ್ ಪ್ರೈಸಸ್, ಮಂಜು ಅಸೋಸಿಯೇಟ್ಸ್, ಮಾರುತಿ ಎಂಟರ್ ಪ್ರೈಸಸ್, ಆದಿತ್ಯ ಎಂಟರ್ ಪ್ರೈಸಸ್, ಪರಸ್ ಅಂಡ್ ಕೋ, ಬನಶಂಕರಿ ಎಂಟರ್ ಪ್ರೈಸಸ್, ಶ್ರೀಹರಿ ಎಂಟರ್ ಪ್ರೈಸಸ್, ತೇಜಸ್ವಿನಿ ಎಂಟರ್ ಪ್ರೈಸಸ್, ಸೂರ್ಯ ಅಂಡ್ ಕೋ, ಎಚ್‍ಎನ್‍ಎಸ್ ಅಂಡ್ ಕೋ, ಸಾಯಿ ರತನ್, ವಿಕ್ರಾಂತ್ ಎಂಟರ್ ಪ್ರೈಸಸ್, ನಿರ್ಮಲ್ ಅಂಡ್ ಕೋ, ಶ್ರೀರಾಮ ಎಂಟರ್ ಪ್ರೈಸಸ್, ಚಾಮುಂಡೇಶ್ವರಿ ಎಂಟರ್ ಪ್ರೈಸಸ್, ಆರ್.ಆರ್ ಎಂಟರ್ ಪ್ರೈಸಸ್, ರಾಯಲ್ ಇಎನ್ ಟಿಪಿ, ಆರ್.ಕೆ.ಎಂಟರ್ ಪ್ರೈಸಸ್, ಶ್ರೀವಾರಿ ಆ್ಯಂಡ ಕಂಪನಿ, ಕಾರ್ತಿಕ್ ಆ್ಯಂಡ ಕಂಪನಿ, ಅಮೃತಾಯ ಕೌಂಟರ್‍ಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದರು.