Home ಕರ್ನಾಟಕ ಬೆಂಗಳೂರು | ವ್ಯಕ್ತಿಯ ಅಪಹರಣ ಆರೋಪ: ಆರು ಮಂದಿ ವಿರುದ್ಧ ಎಫ್‍ಐಆರ್

ಬೆಂಗಳೂರು | ವ್ಯಕ್ತಿಯ ಅಪಹರಣ ಆರೋಪ: ಆರು ಮಂದಿ ವಿರುದ್ಧ ಎಫ್‍ಐಆರ್

4
0

ಬೆಂಗಳೂರು: ಮಹಿಳೆಯರನ್ನು ಬಳಸಿಕೊಂಡು ವ್ಯಕ್ತಿಯನ್ನು ಅಪಹರಿಸಿದ ಆರೋಪದಡಿ ಕನ್ನಡಪರ ಸಂಘಟನೆಯೊಂದರ ಅಧ್ಯಕ್ಷ ಸೇರಿದಂತೆ ಆರು ಜನರ ವಿರುದ್ಧ ಇಲ್ಲಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಮಂಜುನಾಥ್ ಎಂಬಾತನನ್ನು ಅಪಹರಿಸಿದ್ದ ಆರೋಪದಡಿ ಕನ್ನಡ ಪರ ಸಂಘಟನೆಯೊಂದರ ಅಧ್ಯಕ್ಷ ಪ್ರಕಾಶ್, ಮಂಜುಳಾ ಎಂಬಾಕೆ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ್, ಆರೋಪಿ ಮಂಜುಳಾ ಬಳಿ 8 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ವಾಪಸ್ ನೀಡಲಾಗದಿದ್ದಾಗ ಮಂಜುನಾಥ್ ವಿರುದ್ಧ ಮಂಜುಳಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಎ.4ರಂದು ಕೊರಿಯರ್ ಬಂದಿರುವುದಾಗಿ ಮಂಜುನಾಥ್‍ಗೆ ಕರೆ ಮಾಡಿದ್ದ ಆರೋಪಿಗಳು, ಶಂಕರಮಠ ರಸ್ತೆಯ ಬಳಿ ಕರೆಸಿಕೊಂಡಿದ್ದಾರೆ. ಈ ವೇಳೆ ಮಂಜುಳಾ ಸೇರಿದಂತೆ ಕೆಲ ಮಹಿಳೆಯರು ಕಾರಿನಲ್ಲಿ ಬಂದು ಮಂಜುನಾಥ್ ಅವರನ್ನು ಅಪಹರಿಸಿದ್ದಾರೆ.

ಕಾರಿನಲ್ಲಿದ್ದ ಪ್ರಕಾಶ್ ಮತ್ತು ಆತನ ಚಾಲಕ ವೆಂಕಟಾಚಲಪತಿ, ಮಹಿಳೆಯರೊಂದಿಗೆ ಸೇರಿ ತನ್ನ ಕಚೇರಿಗೆ ಕರೆದೊಯ್ದು ಥಳಿಸಿದ್ದಾರೆ. ಬಳಿಕ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆ. ನಂತರವೂ ಸಹ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ತನಗೆ ಜೀವಭಯವಿದೆ ಎಂದು ಮಂಜುನಾಥ್ ದೂರಿದ್ದಾರೆ.

ಮಂಜುನಾಥ್ ನೀಡಿದ್ದ ದೂರಿನನ್ವಯ ಸದ್ಯ ಮಂಜುಳಾ, ಪ್ರಕಾಶ್, ವೆಂಕಟಾಚಲಪತಿ ಸೇರಿ ಆರು ಮಂದಿಯ ವಿರುದ್ಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here