ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದು, ನಗರದ ಜನರಿಗೆ ಸಮಂಜಸ ಬೆಲೆಯಲ್ಲಿ ಮತ್ತು ಸುರಕ್ಷಿತ ಮೂಲಗಳಿಂದ ಟ್ಯಾಂಕರ್ ನೀರನ್ನು ಪಡೆಯಲು ಸಹಾಯ ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಆಗಸ್ಟ್ 2025 ರಲ್ಲಿ ಸಂಚಾರಿ ಕಾವೇರಿ ನೀರು ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದಕ್ಕೆ ಈಗ ಇನ್ನೂ 60 ಟ್ಯಾಂಕರ್ಗಳನ್ನು ಸೇರಿಸಲಾಗುತ್ತಿದೆ. ಜನರು ಆನ್ಲೈನ್ನಲ್ಲೂ ಟ್ಯಾಂಕರ್ ನೀರಿಗಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಈ ಸೇವೆಗಳನ್ನು ಪಡೆಯಬಹುದು.
“ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ವಾಸಿಸುವ ಜನರ ನೀರಿನ ಕೊರತೆಯನ್ನು ನಿಭಾಯಿಸಲು ಇದನ್ನು ಪ್ರಾರಂಭಿಸಲಾಗಿದೆ. ನಮ್ಮಲ್ಲಿ ಈಗ 60 ಟ್ಯಾಂಕರ್ಗಳಿವೆ ಮತ್ತು ನಾವು ಇನ್ನೂ 60 ಟ್ಯಾಂಕ್ಗಳನ್ನು ಸೇರಿಸುತ್ತಿದ್ದೇವೆ” ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ವಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ನೀರಿನ ಕೊರತೆ ಇದೆ ಎಂದು ಒಪ್ಪಿಕೊಂಡ ಅವರು, ಬೇಸಿಗೆಯಲ್ಲಿ ಬೋರ್ವೆಲ್ಗಳು ಒಣಗುತ್ತವೆ ಎಂದು ಹೇಳಿದರು.

“ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿ ಕಾವೇರಿ ನೀರಿನ ಉತ್ತಮ ಸರಬರಾಜು ಇದೆ. ನಾವು ಈ ಪ್ರದೇಶಗಳ ಮೇಲೆ ಹೆಚ್ಚು ಗಮನಹರಿಸುವ ಅಗತ್ಯವಿಲ್ಲ. ಆದರೆ ಉತ್ತರ ಮತ್ತು ಪೂರ್ವದಲ್ಲಿ, ಪ್ರತಿ ವರ್ಷ ನೀರಿನ ಸಮಸ್ಯೆ ಆಗುತ್ತದೆ. ಹೀಗಾಗಿ ನಾವು ಸಂಚಾರಿ ಕಾವೇರಿ ನೀರಿನ ಸೇವೆಗಳನ್ನು ಒದಗಿಸುತ್ತಿದ್ದೇವೆ. 5,000 ಲೀಟರ್ ನೀರಿನ ಸಾಮರ್ಥ್ಯದ ಖಾಸಗಿ ನೀರಿನ ಟ್ಯಾಂಕರ್ಗಳನ್ನು ಮತ್ತು ಅಗತ್ಯವಿದ್ದರೆ ಮಿನಿ ವಾಟರ್ ಟ್ಯಾಂಕರ್ಗಳನ್ನು ನಿಯೋಜಿಸುತ್ತೇವೆ” ಎಂದರು.
