ಬೆಂಗಳೂರು: ನಗರದಲ್ಲಿ ತೀವ್ರವಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ನಗರದ ವಕೀಲ ಎ.ವಿ. ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿದೆ.
ಟ್ರಾಫಿಕ್ ಸಮಸ್ಯೆಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳೇ ಪರಿಹರಿಸಬೇಕಾದ ವಿಷಯವಾಗಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಅರ್ಜಿದಾರರು ಖುದ್ದು ವಾದ ಮಂಡಿಸಿ, ಬೆಂಗಳೂರು ವಿಶ್ವದಲ್ಲೇ 2ನೇ ಸಂಚಾರ ದಟ್ಟಣೆಯ ನಗರವಾಗಿದ್ದು, ಜನರು ದಿನನಿತ್ಯ ಪರದಾಡುತ್ತಿದ್ದಾರೆ. ಸಂಚಾರ ದಟ್ಟಣೆ ಕುರಿತಂತೆ ತಮ್ಮ ಮಕ್ಕಳೂ ದೂರಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದ್ದರಿಂದ ಈ ಸಂಚಾರ ದಟ್ಟಣೆ ಪರಿಹಾರಕ್ಕೆ ಹೈಕೋರ್ಟ್ ಉಸ್ತುವಾರಿಯಲ್ಲಿ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಈ ವಾದವನ್ನು ಆಲಿಸಿದ ಬಳಿಕ ಪೀಠ, ಉಪಮುಖ್ಯಮಂತ್ರಿಗಳೇ ಸಮಸ್ಯೆಯನ್ನು ಪರಿಗಣಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಯಾವ ಆದೇಶ ನೀಡಬಹುದು ಎಂದು ಪೀಠ ಹೇಳಿತು.
ಅಲ್ಲದೆ, ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ನಿರೀಕ್ಷಿಸುತ್ತೇವೆ. ಈ ವಿಚಾರದಲ್ಲಿ ಕೋರ್ಟ್ ನಿರ್ದೇಶನದ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದ ಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿ ಆದೇಶಿಸಿದೆ.
