ತನ್ನ ಪತ್ನಿಯನ್ನು ಮನೆಗೆ ಕಳುಹಿಸಿ ಕೊಡದ ಅತ್ತೆಯ ಮೇಲೆ ಕೆಂಡಾಮಂಡಲಗೊಂಡ ಅಳಿಯನೊಬ್ಬ ಅತ್ತೆಯ ಮುಖವನ್ನು ಬ್ಲೇಡ್ ನಿಂದ ಕೊಯ್ದು ಛಿದ್ರಗೊಳಿಸಿರುವ ಘಟನೆಯೊಂದು ಕಮಲಾನಗರದಲ್ಲಿ ನಡೆದಿದೆ. ಬೆಂಗಳೂರು: ತನ್ನ ಪತ್ನಿಯನ್ನು ಮನೆಗೆ ಕಳುಹಿಸಿ ಕೊಡದ ಅತ್ತೆಯ ಮೇಲೆ ಕೆಂಡಾಮಂಡಲಗೊಂಡ ಅಳಿಯನೊಬ್ಬ ಅತ್ತೆಯ ಮುಖವನ್ನು ಬ್ಲೇಡ್ ನಿಂದ ಕೊಯ್ದು ಛಿದ್ರಗೊಳಿಸಿರುವ ಘಟನೆಯೊಂದು ಕಮಲಾ ನಗರದಲ್ಲಿ ನಡೆದಿದೆ.
ಭವಾನಿ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ. ಹಲ್ಲೆ ನಡೆಸಿದ ಅಳಿಯನನ್ನು ಶ್ರೀರಾಂಪುರ ನಿವಾಸಿ ಮಂಜುನಾಥ್ (27) ಎಂದು ಗುರ್ತಿಸಲಾಗಿದೆ.
ಆರೋಪಿ ಭವಾನಿಯವರ ಎರಡನೇ ಪುತ್ರಿ ಚೈತ್ರಾ ಎಂಬುವನ್ನು ವಿವಾಸವಾಗಿದ್ದ. ಇಬ್ಬರದ್ದು ಪ್ರೇಮ ವಿವಾಹವಾಗಿತ್ತು. ಇಬ್ಬರ ನಡುವೆ ಜಗಳವಾಗಿದ್ದು, ಯಾರಿಗೂ ಹೇಳದೆಯೇ ಚೈತ್ರಾ ತಾಯಿ ಮನೆಗೆ ಬಂದಿದ್ದಳು.
ತಾಯಿ ಮನೆಗೆ ಬಂದ ಚೈಂತ್ರ ಪತಿ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ಭಾನುವಾರ ರಾತ್ರಿ ಮಂಜುನಾಥ್ ಪತ್ನಿಯನ್ನು ಕರೆದುಕೊಂಡು ಹೋಗಲು ಅತ್ತೆ ಭವಾನಿಯವರ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಮನೆಯಲ್ಲಿ ಕಾಣಿಸಿಲ್ಲ. ಈ ವೇಳೆ ಭವಾನಿಯವರ ಮೊದಲ ಪುತ್ರಿ ಸುಹಾನಾಳನ್ನು ವಿಚಾರಿಸಿದ್ದಾನೆ. ಈ ವೇಳೆ ಸುಹಾನಾ ಏನನ್ನೂ ಹೇಳದೆ ಹೊರಗೆ ಹೋಗಿದ್ದಾಳೆ.
ಬಳಿಕ ಅತ್ತೆ ಬಳಿ ವಿಚಾರಿಸಿದ್ದಾನೆ. ಅವರಿಂದಲೂ ಸಮಾಧಾನಕರ ಉತ್ತರ ಸಿಗದ ಹಿನ್ನೆಲೆಯಲ್ಲಿ ಕೆಂಡಾಮಂಡಲಗೊಂಡು ಬೇಜಿನಲ್ಲಿದ್ದ ಬ್ಲೇಡ್ ತೆಗೆದುಕೊಂಡು ಅತ್ತೆಯ ಮುಖವನ್ನು ಮನಬಂದಂತೆ ಕೊಯ್ದು, ಛಿದ್ರಗೊಳಿಸಿದ್ದಾನೆ. ಬಳಿಕ ಮಹಿಳೆ ಕೂಗಾಡಿದ ಹಿನ್ನೆಲೆಯಲ್ಲಿ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಬಳಿಕ ಮನೆಗೆ ಬಂದ ಭವಾನಿಯವಾರ ಮೊದಲ ಪುತ್ರಿ ಸುಹಾನಾ ತಾಯಿಯನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ನಮ್ಮ ತಾಯಿಯನ್ನು ಗುರ್ತಿಸಲು ಸಾಧ್ಯವಾಗುತ್ತಿಲ್ಲ, ಮುಖ ವಿರೂಪಗೊಂಡಿದೆ. ಮುಖಕ್ಕೆ 34 ಹೊಲಿಗೆಗಳನ್ನು ಹಾಕಲಾಗಿದೆ. ತಾಯಿ ಅತೀವ್ರ ನೋವಿನಿಂದ ಬಳಲುತ್ತಿದ್ದಾರೆಂದು ಸುಹಾನಾ ಅವರು ಹೇಳಿದ್ದಾರೆ.
ಘಟನೆ ಸಂಬಂಧ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಜೊತೆಗೆ ಕೊಲೆ ಯತ್ನ (ಐಪಿಸಿ 307) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬಸವೇಶ್ವರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.