ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಲ್ಲಿ ವಾಹನ ಸವಾರರು ಎದುರಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಮುಂದಿನ ವಾರದ ಮಧ್ಯಭಾಗದ ವೇಳೆಗೆ ನಿವಾರಣೆಯಾಗಲಿದೆ. ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಲ್ಲಿ ವಾಹನ ಸವಾರರು ಎದುರಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಮುಂದಿನ ವಾರದ ಮಧ್ಯಭಾಗದ ವೇಳೆಗೆ ನಿವಾರಣೆಯಾಗಲಿದೆ.
ಜುಲೈ ಆರಂಭದಿಂದ ಸಂಚಾರಕ್ಕೆ ತಡೆಯೊಡ್ಡಿದ್ದ ಇಲ್ಲಿನ ಪೊಲೀಸ್ ಠಾಣೆ ಮುಂಭಾಗದ ಸರ್ವೀಸ್ ರಸ್ತೆ ಮುಂದಿನ ವಾರ ಉದ್ಘಾಟನೆಗೊಳ್ಳಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲ್ಲಿ ಎರಡು ಪಿಯರ್ ಕ್ಯಾಪ್‌ಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಕಾಂಕ್ರೀಟೀಕರಣ ಕಾಮಗಾರಿ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ವಿಸ್ ರಸ್ತೆಯು ಫ್ಲೈಓವರ್‌ನ ಡೌನ್ ರಾಂಪ್‌ನಲ್ಲಿ ನಗರದ ಕಡೆಗೆ ಸಾಗುವ ದಿಕ್ಕಿನಲ್ಲಿದೆ. ಕಾಮಗಾರಿಗಾಗಿ ರಸ್ತೆಯ ಅರ್ಧ ಭಾಗವನ್ನು ಮುಚ್ಚಲಾಗಿತ್ತು. ಇದೀಗ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಂಡಿದೆ. ಕಾಂಕ್ರಿಟೀಕರಣ ಗಟ್ಟಿಯಾಗಲು ಒಂದು ವಾರ ಬೇಕು. ಹೀಗಾಗಿ ಮುಂದಿನ ವಾರ ಬುಧವಾರ ಅಥವಾ ಗುರುವಾರದಂದು ಸಾರ್ವಜನಿಕ ಸಂಚಾರಕ್ಕೆ ಬಿಡಲು ನೋಡುತ್ತಿದ್ದೇವೆ ಎಂದು ಬಿಡಿಎಯ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.
ಈ ಸರ್ವಿಸ್ ರಸ್ತೆಯಿಂದ ನಾಲ್ಕು ಅಡ್ಡರಸ್ತೆಗಳು ಹೋಗುವುದರಿಂದ ಹೆಬ್ಬಾಳ ಗ್ರಾಮ ಮತ್ತು ಸುತ್ತಮುತ್ತಲಿನ ನಿವಾಸಿಗಳು ಈ ರಸ್ತೆಯನ್ನು ಬಳಸುತ್ತಾರೆ. ಈಗಿರುವ ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗಿನ ಎರಡು ಲೇನ್‌ಗಳಿಗೆ ಇನ್ನೂ ಮೂರು ಲೇನ್‌ಗಳನ್ನು ಸೇರಿಸಲು ಬಿಡಿಎ ಪ್ರಸ್ತುತ ಇಲ್ಲಿನ ಹೆಬ್ಬಾಳ ಮೇಲ್ಸೇತುವೆಯ ಅಗಲೀಕರಣವನ್ನು ಕೈಗೆತ್ತಿಕೊಂಡಿದೆ. ಪ್ರತಿಯೊಂದು ಲೇನ್ 700 ಮೀಟರ್ ಉದ್ದ ಮತ್ತು ಒಟ್ಟು 10.5 ಮೀಟರ್ ಅಗಲಕ್ಕೆ ಸಾಗಲಿದೆ.
ಈ ಕಾಮಗಾರಿಗೆ ಸಂಬಂಧಿಸಿದಂತೆ ಮಾತ್ರ ಸರ್ವಿಸ್ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಕಾಮಗಾರಿಯನ್ನು ಕೈಗೊಳ್ಳಲು ನಾವು ಫ್ಲೈಓವರ್ ನ್ನು ಕೆಲವು ಭಾಗಗಳಲ್ಲಿ ನಿರ್ಬಂಧಿಸುತ್ತೇವೆ. ನಂತರ ಅದನ್ನು ಸಂಚಾರಕ್ಕೆ ಮುಕ್ತಗೊಳಿಸಿ ಇನ್ನೊಂದು ಭಾಗವನ್ನು ಮುಚ್ಚುತ್ತೇವೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.
ಹೊಸ ಲೇನ್‌ಗಳನ್ನು ಸೇರಿಸುವ ಕೆಲಸವು ಜನವರಿಯಲ್ಲಿ ಪ್ರಾರಂಭವಾಯಿತು. ಇಲ್ಲಿಯವರೆಗೆ ಹೆಬ್ಬಾಳದಲ್ಲಿ ರೈಲ್ವೆ ಕ್ರಾಸಿಂಗ್‌ವರೆಗೆ ಹತ್ತು ಕಂಬಗಳ ವಿನ್ಯಾಸ ಮತ್ತು ಯೋಜನೆ ಸಿದ್ಧವಾಗಿದೆ. ಎಲ್ಲಾ ಹತ್ತು ಕಂಬಗಳಿಗೆ ಅಡಿಪಾಯ ಪೂರ್ಣಗೊಂಡಿದೆ ಎಂದು ಹೇಳಿದರು.