ಬೆಳಗಾವಿ: ಬುದ್ಧಿಮಾಂದ್ಯ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ಎಸಗಿದ್ದರಿಂದ ಮಗು ಜನಿಸಿದ ಪ್ರಕರಣ ಬೆಳಗಾವಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯುವತಿಯ ತಾಯಿ ಮೃತಪಟ್ಟಿದ್ದರಿಂದ ಮನೆಯಲ್ಲಿ ತಂದೆ- ಮಗಳು ಮಾತ್ರ ಇರುತ್ತಿದ್ದರು. 2023ರ ಫೆಬ್ರವರಿಯಲ್ಲಿ ಘಟನೆ ನಡೆದಿದ್ದು,ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ.
ಗ್ರಾಮಸ್ಥರಿಗೆ ಯುವತಿ ಗರ್ಭ ಧರಿಸಿದ ಅನುಮಾನ ಬಂದಿದ್ದರಿಂದ ಅವರು ಸ್ಥಳೀಯ ಆಶಾ ಕಾರ್ಯಕರ್ತೆಯರ ಬಳಿ ಮಾಹಿತಿ ಹಂಚಿಕೊಂಡಿದ್ದು, ಅವರು ಒಂದು ಎನ್‌ಜಿಒ ತಂಡದ ಸಹಾಯ ಪಡೆದು ಯುವತಿಯನ್ನು ಪರಿಶೀಲಿಸಿದಾಗ ವಿಷಯ ಖಚಿತವಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಯುವತಿಗೆ ಜನಿಸಿದ ಮಗು ಹಾಗೂ ಆಕೆಯ ತಂದೆಯ ಡಿಎನ್‌ಎ ಅನ್ನು ಆಗಸ್ಟ್‌ನಲ್ಲಿ ತಪಾಸಣೆ ಮಾಡಲಾಗಿತ್ತು. ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದರಿಂದ ಮಗು ಜನಿಸಿದೆ ಎಂಬುದು ಖಚಿತವಾದ ಬಳಿಕ ಆರೋಪಿ ತಂದೆಯನ್ನು ಬಂಧಿಸಿ, ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಕೂಡ ಸಲ್ಲಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ ಮಾಹಿತಿ ನೀಡಿದ್ದಾರೆ.