Home ಕರ್ನಾಟಕ ಬೇಲೂರು | ಕೆಫೆಯ ಅಂಗಣಕ್ಕೆ ನುಗ್ಗಿದ ಕಾಡಾನೆ : ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದ ಜನರು

ಬೇಲೂರು | ಕೆಫೆಯ ಅಂಗಣಕ್ಕೆ ನುಗ್ಗಿದ ಕಾಡಾನೆ : ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದ ಜನರು

67
0

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಚೀಕನಹಳ್ಳಿ-ಕೈಮರ ಬಳಿಯಿರುವ ಕೆಫೆಯೊಂದಕ್ಕೆ ಒಂಟಿ ಕಾಡಾನೆಯೊಂದು ಪ್ರವೇಶಿಸಿದ ಘಟನೆ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.

ಧರ್ಮಸ್ಥಳ – ಸುಬ್ರಹ್ಮಣ್ಯಕ್ಕೆ ತೆರಳುವ ಯಾತ್ರಿಕರು ಹಾಗೂ ದಿನನಿತ್ಯ ಈ ರಸ್ತೆ ಮೂಲಕ ಹಾದು ಹೋಗುವ ಪ್ರಯಾಣಿಕರಿಂದ ಕೆಫೆಯು ಜನಜಂಗುಳಿಯಿಂದ ಕೂಡಿತ್ತು. ಕಾಫಿ ತೋಟದಲ್ಲಿ ತೆರಳುತ್ತಿದ್ದ ಹೆಣ್ಣಾನೆಯನ್ನು ಕೆಲ ಯುವಕರು ವಿಡಿಯೋ ಮಾಡಲು ಪ್ರಾರಂಭಿಸಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆನೆಯು ಏಕಾಏಕಿ ಮುಖ್ಯರಸ್ತೆಗೆ ಬಂದಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿದರು ಎಂದು ತಿಳಿದು ಬಂದಿದೆ.

ಈ ವೇಳೆ ಓಡುತಿದ್ದ ಜನರನ್ನು ಅಟ್ಟಾಡಿಸಿದ ಆನೆ, ಕೆಫೆಯ ಗೇಟ್‌ನ ಒಳ ಬಂದು ಮತ್ತೊಮ್ಮೆ ಕಾಫಿ ತೋಟಕ್ಕೆ ನುಗ್ಗಿದ ದೃಶ್ಯಾವಳಿಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೀವ ಉಳಿಸಿಕೊಳ್ಳಲು ಕೆಲವರು ಕೆಫೆಯ ಒಳ ಹೋದರೆ ಇನ್ನೂ ಕೆಲವರು ಕಾರಿನೊಳಗೆ ಕುಳಿತು ರಕ್ಷಣೆ ಪಡೆದರು.

ಮೊನ್ನೆಯಷ್ಟೆ ಸಕಲೇಶಪುರ ತಾಲೂಕಿನ ಕೆಸಗುಲಿ ಬಳಿಯ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ʼಕರಡಿʼ ಎಂಬ ಆನೆ ದಾಳಿ ನಡೆಸಿದ್ದರೂ ಪವಾಡ ಸದೃಶವಾಗಿ ಕೂಲಿ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದರು. ತಾಲೂಕಿನಲ್ಲಿ ಕಾಡಾನೆಗಳ ಉಪಟಳದಿಂದ ಜನರು ಹೈರಣಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

LEAVE A REPLY

Please enter your comment!
Please enter your name here